07 November 2026 |

ಗರ್ಭಿಣಿ ಪ್ರೇಯಸಿಯನ್ನು ಬಿಸಿಲೆ ಘಾಟಿಗೆ ಕರೆದೊಯ್ದು ಕೊಲೆಗೆ ಯತ್ನ: ಆರೋಪಿ ಪ್ರಿಯಕರನ ಬಂಧನ!

  • 07 Nov 2026 11:48:55 AM

ಸುಬ್ರಹ್ಮಣ್ಯ: ಪ್ರೇಮ ಸಂಬಂಧದಿಂದ ಗರ್ಭಿಣಿಯಾಗಿದ್ದ ಯುವತಿಯ ಮೇಲೆ ಹಲ್ಲೆ ನಡೆಸಿ, ಆಕೆ ಮೃತಪಟ್ಟಿದ್ದಾಳೆಂದು ಭಾವಿಸಿ ಕಾಡಿನ ಚರಂಡಿಗೆ ಎಸೆದು ಪರಾರಿಯಾಗಿದ್ದ ಆರೋಪಿಯನ್ನು ಸುಬ್ರಹ್ಮಣ್ಯ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಕಡಬ ತಾಲ್ಲೂಕಿನ ಕೊಣಾಜೆ ನಿವಾಸಿ ಪ್ರಸಾದ್ ಎಂದು ಗುರುತಿಸಲಾಗಿದೆ.

 

ಕೊಂಬಾರು ಮೂಲದ ಯುವತಿ ಹಾಗೂ ಪ್ರಸಾದ್ ನಡುವೆ ಪ್ರೇಮ ಸಂಬಂಧವಿತ್ತು ಎನ್ನಲಾಗಿದೆ. ಈ ನಡುವೆ ಯುವತಿ ಗರ್ಭಿಣಿಯಾಗಿದ್ದು, ಪ್ರಸಾದ್‌ಗೆ ಬೇರೆ ಯುವತಿಯೊಂದಿಗೆ ವಿವಾಹ ನಿಶ್ಚಯವಾಗಿತ್ತು. ಇದೇ ವಿಚಾರವಾಗಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು ಎಂದು ತಿಳಿದುಬಂದಿದೆ.

 

ಬುಧವಾರ ಯುವತಿಯನ್ನು ಬಿಸಿಲೆ ಘಾಟಿಗೆ ಕರೆದೊಯ್ದ ಪ್ರಸಾದ್, ಅಲ್ಲಿ ಆಕೆಯ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾನೆ. ಹಲ್ಲೆಯಿಂದ ಯುವತಿ ಪ್ರಜ್ಞೆ ಕಳೆದುಕೊಂಡು ಬಿದ್ದಾಗ ಆಕೆ ಮೃತಪಟ್ಟಿದ್ದಾಳೆ ಎಂದು ಭಾವಿಸಿದ ಆರೋಪಿ, ರಸ್ತೆ ಬದಿಯ ಚರಂಡಿಗೆ ಆಕೆಯನ್ನು ಎಸೆದು ಅಲ್ಲಿಂದ ಪರಾರಿಯಾಗಿದ್ದಾನೆ.

 

ನಿರ್ಜನ ಕಾಡಿನ ನಡುವೆ ಚರಂಡಿಯಲ್ಲೇ ಇಡೀ ರಾತ್ರಿ ಕಳೆದ ಯುವತಿ, ಗುರುವಾರ ಬೆಳಿಗ್ಗೆ ಧೈರ್ಯದಿಂದ ರಸ್ತೆಗೆ ಬಂದು ಕೆಎಸ್‌ಆರ್‌ಟಿಸಿ ಬಸ್ ಮೂಲಕ ಸುಬ್ರಹ್ಮಣ್ಯ ತಲುಪಿದ್ದಾಳೆ. ಬಳಿಕ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ನಡೆದ ಘಟನೆಯ ಬಗ್ಗೆ ದೂರು ನೀಡಿದ್ದಾಳೆ.

 

ಯುವತಿಯ ದೂರಿನ ಆಧಾರದ ಮೇಲೆ ತಕ್ಷಣ ಕಾರ್ಯಾಚರಣೆಗಿಳಿದ ಸುಬ್ರಹ್ಮಣ್ಯ ಪೊಲೀಸರು, ನವೆಂಬರ್ 5ರಂದು ಸುಬ್ರಹ್ಮಣ್ಯದ ಖಾಸಗಿ ವಸತಿ ಗೃಹವೊಂದರಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ಪ್ರಸಾದ್‌ನನ್ನು ಬಂಧಿಸಿದ್ದಾರೆ.

 

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯಿಂದ ಹೆಚ್ಚಿನ ಮಾಹಿತಿ ಕಲೆಹಾಕಲು ವಿಚಾರಣೆ ಮುಂದುವರಿಸಿದ್ದಾರೆ.