ಮಂಗಳೂರು: ಹಳೆಯಂಗಡಿ ಸಮೀಪದ ಪಾವಂಜೆ ಜಂಕ್ಷನ್ ಬಳಿ ಶಾಲಾ ಟ್ಯಾಕ್ಸಿ ಮತ್ತು ಕಂಟೇನರ್ ಲಾರಿ ನಡುವೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ನಾಲ್ವರು ವಿಶೇಷ ಚೇತನ ಮಕ್ಕಳು, ಓರ್ವ ಶಿಕ್ಷಕಿ ಹಾಗೂ ಟ್ಯಾಕ್ಸಿ ಚಾಲಕ ಗಾಯಗೊಂಡಿದ್ದು, ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗುರುವಾರ ರಾತ್ರಿ ವಿಶೇಷ ಚೇತನ ಮಕ್ಕಳನ್ನು ಹಳೆಯಂಗಡಿಯಿಂದ ಸುರತ್ಕಲ್ ಕಡೆಗೆ ಕರೆದೊಯ್ಯುತ್ತಿದ್ದ ಶಾಲಾ ಟ್ಯಾಕ್ಸಿ ಪಾವಂಜೆ ಜಂಕ್ಷನ್ ಬಳಿ ಅಪಘಾತಕ್ಕೀಡಾಗಿದೆ.
ಜಂಕ್ಷನ್ ಸಮೀಪ ಅಳವಡಿಸಲಾಗಿದ್ದ ಬ್ಯಾರಿಕೇಡ್ಗಳ ಬಳಿ ಟ್ಯಾಕ್ಸಿ ಚಾಲಕ ಕಂಟೇನರ್ ಲಾರಿಯನ್ನು ಎಡಭಾಗದಿಂದ ಹಿಂದಿಕ್ಕಲು ಪ್ರಯತ್ನಿಸಿದ ಸಂದರ್ಭದಲ್ಲಿ, ಮಂಗಳೂರು ಕಡೆಗೆ ತೆರಳುತ್ತಿದ್ದ ಲಾರಿ ಟ್ಯಾಕ್ಸಿಗೆ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.
ಡಿಕ್ಕಿಯ ತೀವ್ರತೆಗೆ ಟ್ಯಾಕ್ಸಿಯ ಹಿಂಭಾಗ ಸಂಪೂರ್ಣವಾಗಿ ಜಖಂಗೊಂಡಿದ್ದು, ವಾಹನಕ್ಕೆ ಭಾರೀ ಹಾನಿಯಾಗಿದೆ. ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಅಪಘಾತದ ಪರಿಣಾಮ ಹೆದ್ದಾರಿಯಲ್ಲಿ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.





