ಚಿಕ್ಕಮಗಳೂರು: ಪ್ರಸಿದ್ಧ ದೇವಿರಮ್ಮ ಬೆಟ್ಟದ ಜಾತ್ರೆಗೆ ಆಗಮಿಸಿದ್ದ ಭಕ್ತರೊಬ್ಬರು ಬೆಟ್ಟ ಏರುತ್ತಿದ್ದ ವೇಳೆ ಹೃದಯಾಘಾತದಿಂದ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಸಮೀಪದ ಕನ್ಯಾಡಿ ನಿವಾಸಿ ಲಕ್ಷ್ಮಣ್ (32) ಮೃತಪಟ್ಟವರು.
ದೇವಿರಮ್ಮ ಬೆಟ್ಟದ ಜಾತ್ರೆಯ ಎರಡನೇ ದಿನ ಈ ಘಟನೆ ಸಂಭವಿಸಿದೆ. ಬೆಟ್ಟ ಹತ್ತುತ್ತಿದ್ದ ಸಂದರ್ಭದಲ್ಲಿ ಲಕ್ಷ್ಮಣ್ ಅವರು ಏಕಾಏಕಿ ಅಸ್ವಸ್ಥರಾಗಿ ಕುಸಿದು ಬಿದ್ದಿದ್ದಾರೆ. ತೀವ್ರ ಹೃದಯಾಘಾತದಿಂದ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ದೇವಿರಮ್ಮ ಬೆಟ್ಟ ಹತ್ತಲು ಅವಕಾಶ ನೀಡಲಾಗಿದ್ದ ಕೊನೆಯ ದಿನವೇ ಈ ದುರ್ಘಟನೆ ನಡೆದಿದ್ದು, ಜಾತ್ರೆಗೆ ಆಗಮಿಸಿದ್ದ ಭಕ್ತರಲ್ಲಿ ದುಃಖ ಮತ್ತು ಆಘಾತ ಉಂಟುಮಾಡಿದೆ. ಸಂಭ್ರಮದಿಂದ ನಡೆಯುತ್ತಿದ್ದ ಜಾತ್ರೆಯಲ್ಲಿ ಸಂಭವಿಸಿದ ಈ ಸಾವಿನಿಂದ ಸ್ಥಳೀಯರು ಹಾಗೂ ಭಕ್ತರು ಕಂಬನಿ ಮಿಡಿದಿದ್ದಾರೆ.





