10 November 2026 |

ಕಿನ್ನಿಗೋಳಿಯಲ್ಲಿ ದೇವರನ್ನು ತೋರಿಸುವುದಾಗಿ ನಂಬಿಸಿ ಹಣ ವಂಚನೆ: ಸನ್ಯಾಸಿಗಳ ವೇಷದಲ್ಲಿದ್ದ ಇಬ್ಬರು ಸ್ಥಳೀಯರ ವಶಕ್ಕೆ

  • 09 Nov 2026 02:59:44 PM

ಕಿನ್ನಿಗೋಳಿ: ದೇವರನ್ನು ತೋರಿಸುವುದಾಗಿ ನಂಬಿಸಿ, ವಶೀಕರಣದ ನಾಟಕವಾಡುವ ಮೂಲಕ ಟೆಂಪೋ ಚಾಲಕರಿಂದ ಹಣ ದೋಚುತ್ತಿದ್ದ ಆರೋಪದ ಮೇಲೆ ಸನ್ಯಾಸಿಗಳ ವೇಷದಲ್ಲಿದ್ದ ಇಬ್ಬರನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಕಿನ್ನಿಗೋಳಿಯಲ್ಲಿ ನಡೆದಿದೆ. ಈ ತಂಡದಲ್ಲಿದ್ದ ಮತ್ತಿಬ್ಬರು ಸ್ಥಳದಿಂದ ಪರಾರಿಯಾಗಿದ್ದಾರೆ.

 

ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ನಾಲ್ವರು ವ್ಯಕ್ತಿಗಳು ಸನ್ಯಾಸಿಗಳ ವೇಷ ಧರಿಸಿ ಶನಿವಾರ ಬೆಳಗ್ಗಿನಿಂದಲೇ ವಿವಿಧ ಕಡೆಗಳಲ್ಲಿ ಸಂಚರಿಸುತ್ತಿದ್ದರು. ಬಳಿಕ ಅವರು ಕಿನ್ನಿಗೋಳಿ ಟೆಂಪೋ ಪಾರ್ಕ್‌ಗೆ ತೆರಳಿ ಅಲ್ಲಿದ್ದ ಚಾಲಕರನ್ನು ಗುರಿಯಾಗಿಸಿಕೊಂಡು ಹಣ ವಂಚಿಸುವ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ.

 

ಚಾಲಕರಿಗೆ ದೇವರ ದರ್ಶನ ಮಾಡಿಸುವುದಾಗಿ ನಂಬಿಸಿದ ಆರೋಪಿಗಳು, ಅವರ ಕೈಗೆ ಯಾವುದೋ ವಸ್ತುವೊಂದನ್ನು ನೀಡಿ ಅದನ್ನು ಮಾಯ ಮಾಡುವಂತೆ ತೋರಿಸಿ ಮ್ಯಾಜಿಕ್ ಪ್ರದರ್ಶಿಸಿದ್ದಾರೆ. ನಂತರ ವಶೀಕರಣದ ಶಕ್ತಿಯಿಂದ ನಿಮ್ಮ ಬಳಿಯಿರುವ ಹಣವನ್ನು ನಿಮ್ಮ ಕೈಯಿಂದಲೇ ಕೊಡಿಸುವಂತೆ ಮಾಡಬಹುದು ಎಂದು ನಂಬಿಸಿ, ಚಾಲಕರ ಗಮನ ಬೇರೆಡೆ ಸೆಳೆದು ಅವರ ಕಿಸೆಯಲ್ಲಿದ್ದ ಹಣವನ್ನು ಕಳವು ಮಾಡಿದ್ದಾರೆ ಎಂದು ತಿಳಿದುಬಂದಿದೆ.

 

ಕೆಲವು ಸಮಯದ ಬಳಿಕ ತಾವು ಮೋಸ ಹೋಗಿರುವುದನ್ನು ಅರಿತುಕೊಂಡ ಟೆಂಪೋ ಚಾಲಕರು ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ. ಹಣ ವಂಚನೆ ನಡೆಸಿದ ತಂಡದ ಇಬ್ಬರು ಸದಸ್ಯರು ಕಿನ್ನಿಗೋಳಿಯ ಚರ್ಚ್ ಸಮೀಪ ಇರುವ ಮಾಹಿತಿ ತಿಳಿದು ಅಲ್ಲಿಗೆ ತೆರಳಿದ ಚಾಲಕರು, ಅವರನ್ನು ಹಿಡಿದು ವಿಚಾರಣೆ ನಡೆಸಿದ್ದಾರೆ.

 

ಈ ವೇಳೆ ತಂಡದ ಇತರ ಇಬ್ಬರು ಅಲ್ಲಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ. ಸಿಕ್ಕಿಬಿದ್ದ ಇಬ್ಬರನ್ನು ಸ್ಥಳೀಯರು ಮೂಲ್ಕಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

 

ಪೊಲೀಸರಿಂದ ಎಚ್ಚರಿಕೆ;

ಸನ್ಯಾಸಿಗಳ ವೇಷ ಧರಿಸಿ ಜನರನ್ನು ನಂಬಿಸಿ ಹಣ ವಂಚಿಸಲು ಯತ್ನಿಸಿದ ಆರೋಪದ ಹಿನ್ನೆಲೆಯಲ್ಲಿ ಇಬ್ಬರನ್ನು ಪೊಲೀಸರು ವಿಚಾರಣೆ ನಡೆಸಿ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.