ಮಂಗಳೂರು: ಸಕ್ಕರೆ ಮೂಟೆಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಭಾನುವಾರ ರಾತ್ರಿ ನಗರದ ಪಡೀಲ್ ಜಂಕ್ಷನ್ ಸಮೀಪ ನಡೆದಿದೆ. ಅಪಘಾತದಲ್ಲಿ ಲಾರಿ ಚಾಲಕ ಗಾಯಗೊಂಡಿದ್ದು, ಅದೃಷ್ಟವಶಾತ್ ದೊಡ್ಡ ಮಟ್ಟದ ಅನಾಹುತ ಸಂಭವಿಸಿಲ್ಲ.
ಮಂಗಳೂರಿನಿಂದ ಬೆಂಗಳೂರಿನತ್ತ ಸಕ್ಕರೆ ಸಾಗಿಸುತ್ತಿದ್ದ ಲಾರಿ ಪಡೀಲ್ ಜಂಕ್ಷನ್ನಿಂದ ಇಳಿಜಾರು ರಸ್ತೆಯಲ್ಲಿ ಸಂಚರಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಈ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡ ಲಾರಿ ರಸ್ತೆಯ ಎಡಭಾಗಕ್ಕೆ ಮಗುಚಿ ಬಿದ್ದಿದೆ. ಲಾರಿ ಪಲ್ಟಿಯಾದ ರಭಸಕ್ಕೆ ಅದರಲ್ಲಿದ್ದ ಸಕ್ಕರೆ ಮೂಟೆಗಳು ರಸ್ತೆಯುದ್ದಕ್ಕೂ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.
ಅಪಘಾತ ನಡೆದ ಸ್ಥಳದ ಸಮೀಪದಲ್ಲೇ ವಿದ್ಯುತ್ ಪರಿವರ್ತಕವೊಂದು ಇದ್ದು, ಲಾರಿ ಅದರತ್ತ ಸ್ವಲ್ಪ ಹೆಚ್ಚು ಚಲಿಸಿದ್ದರೂ ಗಂಭೀರ ಅನಾಹುತ ಸಂಭವಿಸುವ ಸಾಧ್ಯತೆಯಿತ್ತು. ಆದರೆ ಅದೃಷ್ಟವಶಾತ್ ಲಾರಿ ವಿದ್ಯುತ್ ಪರಿವರ್ತಕಕ್ಕೆ ಡಿಕ್ಕಿ ಹೊಡೆಯದೆ ಪಲ್ಟಿಯಾಗಿರುವುದರಿಂದ ಸಂಭವಿಸಬಹುದಾಗಿದ್ದ ದೊಡ್ಡ ಅಪಾಯ ತಪ್ಪಿದಂತಾಗಿದೆ.
ಘಟನೆಯ ಮಾಹಿತಿ ತಿಳಿದ ತಕ್ಷಣ ಕಂಕನಾಡಿ ನಗರ ಪೊಲೀಸ್ ಠಾಣೆ ಹಾಗೂ ದಕ್ಷಿಣ ಸಂಚಾರ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಅಪಘಾತದಿಂದಾಗಿ ಪಡೀಲ್ ಜಂಕ್ಷನ್ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ವಾಹನಗಳ ಸಂಚಾರಕ್ಕೆ ತೊಂದರೆಯಾಯಿತು. ರಸ್ತೆಯಲ್ಲಿ ಬಿದ್ದಿದ್ದ ಸಕ್ಕರೆ ಮೂಟೆಗಳಿಂದಾಗಿ ವಾಹನಗಳ ಸಾಲು ಉಂಟಾಗಿ ಸಣ್ಣ ಪ್ರಮಾಣದ ಸಂಚಾರ ದಟ್ಟಣೆ ಕಾಣಿಸಿಕೊಂಡಿತ್ತು.





