10 November 2026 |

ವಿಟ್ಲ: ದುರಸ್ತಿಗಾಗಿ ರಸ್ತೆಯಲ್ಲಿ ನಿಂತಿದ್ದ ಲಾರಿಯಲ್ಲಿ ಅಕ್ರಮ ಕೆಂಪು ಕಲ್ಲು ಸಾಗಾಟ ಪತ್ತೆ; ವಾಹನ ವಶಕ್ಕೆ

  • 10 Nov 2026 11:59:47 AM

ಬಂಟ್ವಾಳ: ತಾಲೂಕಿನ ಕನ್ಯಾನ ಗ್ರಾಮದ ಬೈರಿಕಟ್ಟೆ ಪ್ರದೇಶದಲ್ಲಿ ದುರಸ್ತಿಗೀಡಾಗಿ ಸಾರ್ವಜನಿಕ ರಸ್ತೆಯಲ್ಲಿ ನಿಂತಿದ್ದ ಲಾರಿಯಲ್ಲಿ ಅಕ್ರಮವಾಗಿ ಕೆಂಪು ಲ್ಯಾಟರೈಟ್ ಮಣ್ಣು ಸಾಗಿಸುತ್ತಿರುವುದು ಪೊಲೀಸರ ಪರಿಶೀಲನೆ ವೇಳೆ ಪತ್ತೆಯಾಗಿದೆ.

 

ಸಾರ್ವಜನಿಕ ರಸ್ತೆಯಲ್ಲಿ ಲಾರಿ ನಿಂತಿದ್ದರಿಂದ ವಾಹನಗಳ ಸಂಚಾರಕ್ಕೆ ಅಡಚಣೆಯಾಗುತ್ತಿದೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ವಿಟ್ಲ ಪೊಲೀಸ್ ಉಪನಿರೀಕ್ಷಕ ರಾಮಕೃಷ್ಣ ಅವರು ಪೊಲೀಸ್ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.

 

ಈ ಸಂದರ್ಭದಲ್ಲಿ KA-21-C-4608 ನೋಂದಣಿ ಸಂಖ್ಯೆಯ ಘನ ಲಾರಿ ರಸ್ತೆಯಲ್ಲಿ ನಿಂತಿರುವುದು ಕಂಡುಬಂದಿದೆ. ಲಾರಿ ಚಾಲಕನಾದ ಹಾಸನ ಜಿಲ್ಲೆಯ ಸಕಲೇಶಪುರ ನಿವಾಸಿ ಇರ್ಫಾನ್ ಪಾಷಾ (40) ಅವರನ್ನು ಪೊಲೀಸರು ವಿಚಾರಿಸಿದಾಗ, ವಾಹನ ದುರಸ್ತಿಗೀಡಾಗಿರುವುದಾಗಿ ತಿಳಿಸಿದ್ದಾರೆ.

 

ಬಳಿಕ ಲಾರಿಯಲ್ಲಿದ್ದ ಸರಕನ್ನು ಪರಿಶೀಲಿಸಿದಾಗ, ಯಾವುದೇ ಅಧಿಕೃತ ಪರವಾನಿಗೆ ಅಥವಾ ಸಂಬಂಧಿತ ದಾಖಲೆಗಳಿಲ್ಲದೆ ಕೆಂಪು ಲ್ಯಾಟರೈಟ್ ಮಣ್ಣನ್ನು ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ.

 

ಕೂಡಲೇ ಪೊಲೀಸರು ಲಾರಿಯನ್ನು ವಶಕ್ಕೆ ಪಡೆದುಕೊಂಡಿದ್ದು, ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ. 229/2026ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತೆ (BNS) ಹಾಗೂ ಗಣಿ ಮತ್ತು ಖನಿಜಗಳ ಕಾಯ್ದೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.