10 November 2026 |

ಬಂಟ್ವಾಳ ಫ್ಲೈಓವರ್‌ನಲ್ಲಿ ಭೀಕರ ಅಪಘಾತ: 40 ಅಡಿ ಮೇಲಿನಿಂದ ಸರ್ವೀಸ್ ರಸ್ತೆಗೆ ಬಿದ್ದ ಬೈಕ್ ಸವಾರ; ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು

  • 10 Nov 2026 08:32:28 PM

ಬಂಟ್ವಾಳ: ಎರಡು ಬುಲೆಟ್ ಬೈಕ್‌ಗಳ ನಡುವೆ ಸಂಭವಿಸಿದ ಡಿಕ್ಕಿಯಿಂದ ಸವಾರನೊಬ್ಬ ಸುಮಾರು 40 ಅಡಿ ಎತ್ತರದ ಬಿ.ಸಿ.ರೋಡ್ ಫ್ಲೈಓವರ್‌ನಿಂದ ಕೆಳಗಿನ ಸರ್ವೀಸ್ ರಸ್ತೆಗೆ ಎಸೆಯಲ್ಪಟ್ಟ ಘಟನೆ ನಡೆದಿದೆ. ಭೀಕರ ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅದನ್ನು ಕಂಡವರು ಬೆಚ್ಚಿಬಿದ್ದಿದ್ದಾರೆ. ಅದೃಷ್ಟವಶಾತ್ ಸವಾರ ಗಂಭೀರ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

 

ಅಪಘಾತದಲ್ಲಿ ಆರ್ವಿನ್ ಅತ್ತಾವರ ಎಂಬಾತ ಗಾಯಗೊಂಡಿದ್ದಾನೆ. ಬೆಂಗಳೂರಿನಲ್ಲಿ ವಾಸವಾಗಿರುವ ವಿದ್ಯಾರ್ಥಿನಿ ದಿಯಾ ಕೊಟ್ಟಾರಿ ಆತನ ಸ್ನೇಹಿತೆಯಾಗಿದ್ದು, ಆಕೆಯನ್ನು ಕರೆತರಲು ಆರ್ವಿನ್ ತನ್ನ ಬುಲೆಟ್ ಬೈಕ್‌ನಲ್ಲಿ ಹಾಸನಕ್ಕೆ ತೆರಳಿದ್ದ ಎನ್ನಲಾಗಿದೆ.

 

ನಂತರ ಇಬ್ಬರೂ ಪ್ರತ್ಯೇಕ ಬುಲೆಟ್ ಬೈಕ್‌ಗಳಲ್ಲಿ ಪ್ರಯಾಣಿಸುತ್ತಾ ಬಂಟ್ವಾಳದ ಮೂಲಕ ಸಾಗುತ್ತಿದ್ದರು. ಈ ವೇಳೆ ಬಿ.ಸಿ.ರೋಡ್ ಫ್ಲೈಓವರ್‌ನ ಮಧ್ಯಭಾಗದಲ್ಲಿ ಇಬ್ಬರ ಬೈಕ್‌ಗಳ ನಡುವೆ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ತೀವ್ರತೆಗೆ ಆರ್ವಿನ್ ಬೈಕ್‌ನಿಂದ ಮೇಲಕ್ಕೆ ಎಸೆಯಲ್ಪಟ್ಟು ಸುಮಾರು 40 ಅಡಿ ಕೆಳಗಿರುವ ಸರ್ವೀಸ್ ರಸ್ತೆಗೆ ಬಿದ್ದಿದ್ದಾನೆ.

 

ಇಷ್ಟೊಂದು ಎತ್ತರದಿಂದ ಬಿದ್ದರೂ ಆರ್ವಿನ್ ಬದುಕುಳಿದಿರುವುದು ಅಚ್ಚರಿಗೆ ಕಾರಣವಾಗಿದೆ. ಅಪಘಾತದ ಸಮಯದಲ್ಲಿ ಕೈ ಸೇರಿದಂತೆ ದೇಹದ ಕೆಲವು ಭಾಗಗಳಿಗೆ ರಕ್ಷಣಾತ್ಮಕ ಕವಚಗಳನ್ನು ಧರಿಸಿದ್ದ ಎನ್ನಲಾಗಿದ್ದು, ಇದರಿಂದ ಗಾಯದ ತೀವ್ರತೆ ಕಡಿಮೆಯಾಗಿರುವ ಸಾಧ್ಯತೆಯಿದೆ.

 

ಖಾಲಿ ಸರ್ವೀಸ್ ರಸ್ತೆ ಸವಾರನಿಗೆ ವರದಾನ:

ಆರ್ವಿನ್ ಕೆಳಕ್ಕೆ ಬಿದ್ದ ಸಂದರ್ಭದಲ್ಲಿ ಸರ್ವೀಸ್ ರಸ್ತೆಯಲ್ಲಿ ಯಾವುದೇ ವಾಹನಗಳು ಸಂಚರಿಸುತ್ತಿರಲಿಲ್ಲ. ಸಾಮಾನ್ಯವಾಗಿ ವಾಹನಗಳ ಓಡಾಟ ಹೆಚ್ಚಿರುವ ಈ ರಸ್ತೆಯಲ್ಲಿ ಆ ಕ್ಷಣದಲ್ಲಿ ವಾಹನ ಇದ್ದಿದ್ದರೆ ಅಪಘಾತದ ಪರಿಣಾಮ ಮತ್ತಷ್ಟು ಗಂಭೀರವಾಗುವ ಸಾಧ್ಯತೆಯಿತ್ತು. ವಾಹನಗಳಿಲ್ಲದಿದ್ದುದರಿಂದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.

 

ಇನ್ನು ಆರ್ವಿನ್ ಜೊತೆಗಿದ್ದ ದಿಯಾ ಕೊಟ್ಟಾರಿ ಕೂಡ ಫ್ಲೈಓವರ್ ಮೇಲೆಯೇ ಬಿದ್ದಿದ್ದು, ಆಕೆಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಆಕೆಯೂ ಯಾವುದೇ ಗಂಭೀರ ಅಪಾಯವಿಲ್ಲದೆ ಪಾರಾಗಿದ್ದಾಳೆ.