15 November 2026 |

ತಾಯಿ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಭೂಗತ ಪಾತಕಿ ರವಿ ಪೂಜಾರಿಗೆ ಕೋರ್ಟ್ ಅನುಮತಿ

  • 14 Nov 2026 10:12:07 AM

ಉಡುಪಿ: ಕುಖ್ಯಾತ ಭೂಗತ ಪಾತಕಿ ರವಿ ಪೂಜಾರಿ ಅವರ ತಾಯಿ ಸುಶೀಲಾ ಪೂಜಾರ್ತಿ (86) ಅವರು ವಯೋಸಹಜ ಅನಾರೋಗ್ಯ ಮತ್ತು ಹೃದಯಾಘಾತದಿಂದ ಗುರುವಾರ ರಾತ್ರಿ ನಿಧನರಾಗಿದ್ದಾರೆ. ತಾಯಿಯ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ರವಿ ಪೂಜಾರಿಗೆ ನ್ಯಾಯಾಲಯ ಷರತ್ತುಬದ್ಧ ಅನುಮತಿ ನೀಡಿದೆ.

 

ಸುಶೀಲಾ ಪೂಜಾರ್ತಿ ಅವರು ಇಬ್ಬರು ಪುತ್ರಿಯರು ಹಾಗೂ ರವಿ ಪೂಜಾರಿ ಸೇರಿದಂತೆ ಮೂವರು ಪುತ್ರರನ್ನು ಅಗಲಿದ್ದಾರೆ. ಅವರ ಅಂತ್ಯಕ್ರಿಯೆ ಶನಿವಾರ ಬೆಳಗ್ಗೆ 11 ಗಂಟೆಗೆ ಉಡುಪಿ ಜಿಲ್ಲೆಯ ಮಲ್ಪೆ ಸಮೀಪದ ನೆರ್ಗಿಯಲ್ಲಿರುವ ಕುಟುಂಬದ ಹಿರಿಯ ಮನೆಯಲ್ಲಿ ನಡೆಯಲಿದೆ.

 

ತಾಯಿಯ ಅಂತಿಮ ವಿಧಿವಿಧಾನಗಳಲ್ಲಿ ಭಾಗವಹಿಸಲು ರವಿ ಪೂಜಾರಿ ಅವರಿಗೆ ಸ್ವಗ್ರಾಮಕ್ಕೆ ತೆರಳಲು ನ್ಯಾಯಾಲಯ ಅವಕಾಶ ನೀಡಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ತಿಳಿಸಿದ್ದಾರೆ.

 

ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಶುಕ್ರವಾರ ಮಧ್ಯಾಹ್ನ ಬೆಂಗಳೂರಿನ ಜೈಲಿನಿಂದ ಬಿಗಿ ಪೊಲೀಸ್ ಭದ್ರತೆಯೊಂದಿಗೆ ರವಿ ಪೂಜಾರಿಯನ್ನು ಉಡುಪಿಗೆ ಕರೆತರಲಾಗಿದೆ. ಶನಿವಾರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ ಬಳಿಕ ಅವರನ್ನು ಮತ್ತೆ ಬೆಂಗಳೂರಿಗೆ ಕರೆದೊಯ್ಯುವಂತೆ ನ್ಯಾಯಾಲಯ ಸೂಚಿಸಿದೆ.

 

ರವಿ ಪೂಜಾರಿಯ ಭದ್ರತಾ ಜವಾಬ್ದಾರಿಯನ್ನು ಬೆಂಗಳೂರಿನ ಆಡುಗೋಡಿಯ ಸಿಟಿ ಆರ್ಮ್ಸ್ ರಿಸರ್ವ್ ವಿಭಾಗದ ಡಿಸಿಪಿ ಹಾಗೂ ಜೈಲು ಅಧಿಕಾರಿಗಳು ನಿರ್ವಹಿಸುತ್ತಿದ್ದಾರೆ. ಉಡುಪಿ ಜಿಲ್ಲಾ ಪೊಲೀಸರೂ ಸ್ಥಳೀಯವಾಗಿ ಹೆಚ್ಚುವರಿ ಭದ್ರತಾ ವ್ಯವಸ್ಥೆ ಕೈಗೊಂಡಿದ್ದಾರೆ.

 

ಇನ್ನು, ರವಿ ಪೂಜಾರಿಯನ್ನು ಉಡುಪಿಗೆ ಕರೆತರುವುದರಿಂದ ಹಿಡಿದು ವಾಪಸ್ ಕರೆದೊಯ್ಯುವವರೆಗಿನ ಪೊಲೀಸ್ ಎಸ್ಕಾರ್ಟ್ ವ್ಯವಸ್ಥೆಯ ಸಂಪೂರ್ಣ ವೆಚ್ಚವನ್ನು ಅವರೇ ಭರಿಸಬೇಕು ಎಂದು ನ್ಯಾಯಾಲಯ ಷರತ್ತು ವಿಧಿಸಿದೆ.