15 November 2026 |

ಕಾರು ಡಿಕ್ಕಿಗೆ ರಿಕ್ಷಾ ಚಾಲಕ ಸಾವು: ಆಸ್ಪತ್ರೆಯಿಂದ ಸ್ಥಳಾಂತರಿಸಲು ಅವಕಾಶ ನೀಡಲಿಲ್ಲವೆಂದು ಸಂಬಂಧಿಕರ ಆಕ್ರೋಶ

  • 14 Nov 2026 10:48:02 AM

ಉಪ್ಪಿನಂಗಡಿ: ಕಾರೊಂದು ಹಿಂಬದಿಯಿಂದ ರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ರಿಕ್ಷಾ ಚಾಲಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ನ.13ರಂದು ರಾಷ್ಟ್ರೀಯ ಹೆದ್ದಾರಿ 75ರ ಬಿಳಿಯೂರು ಗ್ರಾಮದ ಮೈರಕಟ್ಟೆ ಎಂಬಲ್ಲಿ ನಡೆದಿದೆ.

 

ಮೃತರನ್ನು ಸರಳೀಕಟ್ಟೆ ನೈತಡ್ಕ ನಿವಾಸಿ ಸದಾಶಿವ (55) ಎಂದು ಗುರುತಿಸಲಾಗಿದೆ. ಇವರು ತಮ್ಮ ರಿಕ್ಷಾದಲ್ಲಿ ಉಪ್ಪಿನಂಗಡಿಯಿಂದ ಬಿಳಿಯೂರು ಕಡೆಗೆ ಪ್ರಯಾಣಿಸುತ್ತಿದ್ದಾಗ ಹಿಂಬದಿಯಿಂದ ಬಂದ ಕಾರು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

 

ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಸದಾಶಿವ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಿಕ್ಷಾದಲ್ಲಿದ್ದ ಪ್ರಯಾಣಿಕ ವಸಂತ ಕೂಡ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಚೇತರಿಸಿಕೊಂಡಿದ್ದಾರೆ.

 

ಮಂಗಳೂರು ಆಸ್ಪತ್ರೆಗೆ ಸ್ಥಳಾಂತರಿಸಲು ಅವಕಾಶ ನೀಡಲಿಲ್ಲವೆಂದು ಆರೋಪ:

ಸದಾಶಿವ ಅವರು ಘಟನೆಯ ಬಳಿಕ ಸಂಜೆಯವರೆಗೂ ಮಾತನಾಡುವ ಸ್ಥಿತಿಯಲ್ಲಿದ್ದರು ಎನ್ನಲಾಗಿದೆ. ಆದರೆ ಅವರಿಗೆ ಮೈಕೈ ನೋವು ಹಾಗೂ ಎದೆನೋವು ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲು ಸಂಬಂಧಿಕರು ನಿರ್ಧರಿಸಿ ಆಸ್ಪತ್ರೆಯ ಸಿಬ್ಬಂದಿಗೆ ತಿಳಿಸಿದ್ದರು.

 

ಆದರೆ ಮುಖ್ಯ ವೈದ್ಯರು ಬರುವವರೆಗೆ ಸ್ಥಳಾಂತರಿಸಲು ಸಾಧ್ಯವಿಲ್ಲ ಎಂದು ಆಸ್ಪತ್ರೆಯವರು ಹೇಳಿದ್ದರೆನ್ನಲಾಗಿದೆ. ಸಂಬಂಧಿಕರು ಹಲವು ಬಾರಿ ಮನವಿ ಮಾಡಿದರೂ ಮಂಗಳೂರಿಗೆ ಕರೆದೊಯ್ಯಲು ಅನುಮತಿ ನೀಡಲಿಲ್ಲ ಎಂದು ಆರೋಪಿಸಲಾಗಿದೆ.

 

ಸದಾಶಿವ ಅವರ ಸಾವಿನಿಂದ ಕುಟುಂಬಸ್ಥರು ಆಘಾತಕ್ಕೊಳಗಾಗಿದ್ದು, ಆಸ್ಪತ್ರೆಯ ನಿರ್ಧಾರದ ವಿರುದ್ಧ ಸಂಬಂಧಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.