ತಮಿಳುನಾಡು: ರಾತ್ರಿ ಮನೆಯಲ್ಲಿ ಮಲಗಿದ್ದ ವೇಳೆ ವಿಷಪೂರಿತ ಹಾವು ಕಚ್ಚಿದ ಪರಿಣಾಮ ಇಬ್ಬರು ಪುಟ್ಟ ಸಹೋದರಿಯರು ಮೃತಪಟ್ಟಿರುವ ದಾರುಣ ಘಟನೆ ತಮಿಳುನಾಡಿನ ಕಲ್ಲಕುರಿಚಿ ಜಿಲ್ಲೆಯ ಶಂಕರಪುರಂ ಸಮೀಪದ ಮೂಕನೂರ್ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಮೃತ ಮಕ್ಕಳನ್ನು ಕೆ. ಚಂದ್ರನ್ (28) ಮತ್ತು ಸಿ. ಪುಷ್ಪಾ (24) ದಂಪತಿಯ ಪುತ್ರಿಯರಾದ ನಾಲ್ಕು ವರ್ಷದ ಸಿ. ದರ್ಶಿನಿ ಅಲಿಯಾಸ್ ದೇವದರ್ಶಿನಿ ಹಾಗೂ ಒಂದೂವರೆ ವರ್ಷದ ಸಿ. ಜನನಿ ಅಲಿಯಾಸ್ ದೇವಜನನಿ ಎಂದು ಗುರುತಿಸಲಾಗಿದೆ. ಮಕ್ಕಳ ಪಕ್ಕದಲ್ಲೇ ಮಲಗಿದ್ದ ತಾಯಿ ಪುಷ್ಪಾ ಅವರಿಗೂ ಹಾವು ಕಚ್ಚಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಅವರನ್ನು ಕಲ್ಲಕುರಿಚಿ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಚಂದ್ರನ್ ಅವರು ಭತ್ತ ಕೊಯ್ಲು ಯಂತ್ರದ ನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದು, ಉದ್ಯೋಗದ ನಿಮಿತ್ತ ಹೈದರಾಬಾದ್‌ಗೆ ತೆರಳಿದ್ದರು. ಹೀಗಾಗಿ ಮನೆಯಲ್ಲಿ ಪುಷ್ಪಾ ಮತ್ತು ಇಬ್ಬರು ಮಕ್ಕಳು ಮಾತ್ರ ಇದ್ದರು. ಕುಟುಂಬವು ಗ್ರಾಮದ ಕಾಲುವೆಯ ಸಮೀಪದ ಮನೆಯಲ್ಲಿ ವಾಸವಾಗಿತ್ತು.
ಮಂಗಳವಾರ ರಾತ್ರಿ ಸುಮಾರು 9 ಗಂಟೆಗೆ ಊಟ ಮುಗಿಸಿದ ತಾಯಿ ಮತ್ತು ಮಕ್ಕಳು ಮಲಗಿದ್ದರು. ರಾತ್ರಿ 10.30ರ ಸುಮಾರಿಗೆ ಮಕ್ಕಳಿಗೆ ತೀವ್ರವಾಗಿ ವಾಂತಿಯಾಗುತ್ತಿರುವುದು ಹಾಗೂ ಅಸ್ವಸ್ಥತೆಯಿಂದ ನರಳುತ್ತಿರುವ ಶಬ್ದ ಕೇಳಿ ಪುಷ್ಪಾ ಎಚ್ಚರಗೊಂಡಿದ್ದಾರೆ. ತಕ್ಷಣ ಮಕ್ಕಳನ್ನು ಗಮನಿಸಿದಾಗ ವಿಷಪೂರಿತ ಹಾವು ಕಚ್ಚಿರುವುದು ತಿಳಿದುಬಂದಿದೆ ಎನ್ನಲಾಗಿದೆ.
ಘಟನೆಯಿಂದ ತೀವ್ರ ಆತಂಕಕ್ಕೊಳಗಾದ ಪುಷ್ಪಾ ಸಹಾಯಕ್ಕಾಗಿ ಜೋರಾಗಿ ಕೂಗಿಕೊಂಡಿದ್ದಾರೆ. ಈ ದುರಂತದಿಂದ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.





