20 November 2026 |

ಕುಷ್ಟಗಿಯಲ್ಲಿ ಭೀಕರ ರಸ್ತೆ ಅಪಘಾತ: ಸರ್ಕಾರಿ ಬಸ್ ಹರಿದು 7 ವರ್ಷದ ಬಾಲಕ ಸಾವು, ಇಬ್ಬರಿಗೆ ಗಾಯ

  • 19 Nov 2026 01:58:44 PM

ಕೊಪ್ಪಳ: ಜಿಲ್ಲೆಯ ಕುಷ್ಟಗಿ ಸಮೀಪದ ವಣಗೇರಿ ಬಳಿ ಗುರುವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸರ್ಕಾರಿ ಬಸ್ ಹರಿದು 7 ವರ್ಷದ ಬಾಲಕ ಮೃತಪಟ್ಟಿದ್ದಾನೆ. ಬೈಕ್‌ನಲ್ಲಿದ್ದ ಮತ್ತಿಬ್ಬರು ಗಾಯಗೊಂಡಿದ್ದಾರೆ.

 

ಮೃತ ಬಾಲಕನನ್ನು ವಣಗೇರಿ ಗ್ರಾಮದ ಪರಶುರಾಮ ಮಲ್ಲಿಕಾರ್ಜುನ ಗಧಾರಿ ಎಂದು ಗುರುತಿಸಲಾಗಿದೆ. ಈತ ಒಂದನೇ ತರಗತಿಯಲ್ಲಿ ಓದುತ್ತಿದ್ದನು. ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಬಾಲಕನ ತಾಯಿ ತವರು ಮನೆಯಲ್ಲಿದ್ದ ಕಾರಣ, ಕುಷ್ಟಗಿಯಿಂದ ಸುಮಾರು 4 ಕಿ.ಮೀ. ದೂರದಲ್ಲಿರುವ ವಣಗೇರಿ ಸರ್ಕಾರಿ ಶಾಲೆಗೆ ಬಾಲಕ ತೆರಳುತ್ತಿದ್ದನು.

 

ಗುರುವಾರ ಎಂದಿನಂತೆ ತನ್ನ ಸಹೋದರ ಪ್ರವೀಣ ಹಾಗೂ ಮಾವ ಯಮನೂರ ಚೂರಿ ಅವರೊಂದಿಗೆ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ, ಕೊಪ್ಪಳ-ವಿಜಯಪುರ ಮಾರ್ಗದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಬೈಕ್‌ ಅನ್ನು ಓವರ್‌ಟೇಕ್ ಮಾಡುವ ಸಂದರ್ಭದಲ್ಲಿ ಡಿಕ್ಕಿ ಹೊಡೆದಿದೆ.

 

ಡಿಕ್ಕಿಯ ತೀವ್ರತೆಗೆ ಬೈಕ್‌ನಲ್ಲಿದ್ದ ಬಾಲಕ ಪರಶುರಾಮ ರಸ್ತೆಗೆ ಎಸೆಯಲ್ಪಟ್ಟಿದ್ದು, ಇದೇ ವೇಳೆ ಬಸ್ ಆತನ ಮೇಲೆ ಹರಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬೈಕ್‌ನಲ್ಲಿದ್ದ ಸಹೋದರ ಪ್ರವೀಣ ಮತ್ತು ಮಾವ ಯಮನೂರ ಚೂರಿ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದಲ್ಲಿ ಬೈಕ್ ಸಂಪೂರ್ಣ ಜಖಂಗೊಂಡಿದೆ.

 

ಘಟನೆಗೆ ಸಂಬಂಧಿಸಿದಂತೆ ಬಸ್ ಚಾಲಕ ಮಲ್ಲಪ್ಪ ಅಂಗಡಿ ಕುಷ್ಟಗಿ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಆತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಪಘಾತದ ಬಳಿಕ ಬಾಲಕನ ಮೃತದೇಹವನ್ನು ಕುಷ್ಟಗಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.