22 November 2026 |

ದಾಖಲೆಗಳಿಲ್ಲದೆ ಕೆಂಪು ಕಲ್ಲು ಸಾಗಾಟ – ಲಾರಿ ಪೊಲೀಸರ ವಶಕ್ಕೆ, ಚಾಲಕನ ಮೇಲೆ ಹಲ್ಲೆ ಆರೋಪ

  • 21 Nov 2026 09:02:41 AM

ಬಂಟ್ವಾಳ: ಪೆರುವಾಯಿ ಗ್ರಾಮದ ದೇವಸ್ಥಾನದ ಸಮೀಪ ಅಕ್ರಮವಾಗಿ ಕೆಂಪು ಕಲ್ಲು ಸಾಗಿಸುತ್ತಿದ್ದ ಲಾರಿಯನ್ನು ವಿಟ್ಲ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದೇ ವೇಳೆ ಲಾರಿ ಚಾಲಕನ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಆರೋಪದ ಹಿನ್ನೆಲೆಯಲ್ಲಿ ಇಬ್ಬರ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

ಪೊಲೀಸರಿಂದ ಲಾರಿ ವಶಕ್ಕೆ;

ನವೆಂಬರ್ 19ರಂದು ಗುರುವಾರ ಸಂಜೆ ಪೆರುವಾಯಿ ಗ್ರಾಮದ ದೇವಸ್ಥಾನದ ಬಳಿ ಲಾರಿಯನ್ನು ಕೆಲವರು ತಡೆದಿರುವ ಕುರಿತು ವಿಟ್ಲ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಉಪನಿರೀಕ್ಷಕ ಜಯರಾಮ ಕೆ. ಅವರಿಗೆ ಮಾಹಿತಿ ದೊರೆತಿತ್ತು.

 

ಮಾಹಿತಿ ಬಂದ ತಕ್ಷಣ ಪೊಲೀಸ್ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿದ ಅವರು ಲಾರಿಯನ್ನು ಪರಿಶೀಲನೆಗೆ ಒಳಪಡಿಸಿದರು. ಈ ವೇಳೆ KL-59-C-4274 ನೋಂದಣಿ ಸಂಖ್ಯೆಯ ಲಾರಿಯಲ್ಲಿ ಅಗತ್ಯ ದಾಖಲೆಗಳು ಹಾಗೂ ಪರವಾನಿಗೆ ಇಲ್ಲದೆ ಕೆಂಪು ಕಲ್ಲು ಸಾಗಿಸುತ್ತಿರುವುದು ಕಂಡುಬಂದಿದೆ.

 

ಕೂಡಲೇ ಪೊಲೀಸರು ಕೆಂಪು ಕಲ್ಲು ಸಮೇತ ಲಾರಿಯನ್ನು ವಶಕ್ಕೆ ಪಡೆದು, ಚಾಲಕ ಜನಾರ್ದನ (38) ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

 

ಇಬ್ಬರ ವಿರುದ್ಧ ಹಲ್ಲೆ ಪ್ರಕರಣ;

ಈ ಘಟನೆಗೆ ಸಂಬಂಧಿಸಿದಂತೆ ಲಾರಿ ಚಾಲಕ ಜನಾರ್ದನ ಅವರು ವಿಟ್ಲ ಪೊಲೀಸ್ ಠಾಣೆಗೆ ಮತ್ತೊಂದು ದೂರು ನೀಡಿದ್ದಾರೆ.

 

ಪೆರುವಾಯಿ ದೇವಸ್ಥಾನದ ಬಳಿ ಸತೀಶ ಮಣಿಯಾಣಿ ಮತ್ತು ಶ್ರೀನಿವಾಸ ರೈ ಎಂಬವರು ಲಾರಿಯನ್ನು ಅಡ್ಡಗಟ್ಟಿ, ತನ್ನನ್ನು ವಾಹನದಿಂದ ಕೆಳಗಿಳಿಸಿ ಅವಾಚ್ಯವಾಗಿ ನಿಂದಿಸಿದ್ದಲ್ಲದೆ ಹಲ್ಲೆ ನಡೆಸಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

 

ಚಾಲಕ ನೀಡಿದ ದೂರಿನ ಮೇರೆಗೆ ಸತೀಶ ಮಣಿಯಾಣಿ ಹಾಗೂ ಶ್ರೀನಿವಾಸ ರೈ ವಿರುದ್ಧ ವಿಟ್ಲ ಪೊಲೀಸರು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.