22 November 2026 |

ಬಂಟ್ವಾಳ: ನಿಯಂತ್ರಣ ತಪ್ಪಿದ ಕಾರು ಸರಣಿ ಢಿಕ್ಕಿ – ಇಬ್ಬರು ಮೆಕ್ಯಾನಿಕ್‌ಗಳು ಸೇರಿ ಮೂವರಿಗೆ ಗಾಯ

  • 21 Nov 2026 06:57:49 PM

ಬಂಟ್ವಾಳ: ಚಾಲಕನ ನಿಯಂತ್ರಣ ಕಳೆದುಕೊಂಡ ಕಾರೊಂದು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರು ಹಾಗೂ ದುರಸ್ತಿ ಕಾರ್ಯಕ್ಕಾಗಿ ನಿಲ್ಲಿಸಿದ್ದ ಕ್ರೇನ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಮೂವರು ಗಾಯಗೊಂಡ ಘಟನೆ ಬಂಟ್ವಾಳದ ಕಳ್ಳಿಮಾರ್ ಎಂಬಲ್ಲಿ ನಡೆದಿದೆ.

 

ಅಪಘಾತದಲ್ಲಿ ಮಾಧವ ಪಿಟ್ಟರ್, ಪುನೀತ್ ಸಜೀಪ ಹಾಗೂ ಯು. ಮಹಮ್ಮದ್ ಗಾಯಗೊಂಡಿದ್ದಾರೆ. ಪುಂಜಾಲಕಟ್ಟೆಯ ನಿವಾಸಿ ಯು. ಮಹಮ್ಮದ್ ಅವರು ತಮ್ಮ ಮಗಳನ್ನು ಕಾರಿನಲ್ಲಿ ಮಂಗಳೂರಿಗೆ ಕರೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ.

 

ಕಳ್ಳಿಮಾರ್ ಸಮೀಪ ರಸ್ತೆ ಬದಿಯಲ್ಲಿ ಕಾರೊಂದನ್ನು ನಿಲ್ಲಿಸಿ ಅದರ ಚಾಲಕ ಬೇರೆಡೆಗೆ ತೆರಳಿದ್ದರು. ಅದೇ ಸ್ಥಳದ ಸಮೀಪ ಕ್ರೇನ್‌ವೊಂದನ್ನು ದುರಸ್ತಿಗಾಗಿ ನಿಲ್ಲಿಸಲಾಗಿತ್ತು. ಈ ವೇಳೆ ಮಾಧವ ಪಿಟ್ಟರ್ ಕ್ರೇನ್ ದುರಸ್ತಿ ಕೆಲಸದಲ್ಲಿ ನಿರತರಾಗಿದ್ದರು. ಪುನೀತ್ ಸಜೀಪ ಅವರು ಬೈಕ್‌ನಲ್ಲಿ ಕುಳಿತು ಅವರೊಂದಿಗೆ ಮಾತನಾಡುತ್ತಿದ್ದರು ಎನ್ನಲಾಗಿದೆ.

 

ಮಂಗಳೂರಿನ ಕಡೆಗೆ ಪ್ರಯಾಣಿಸುತ್ತಿದ್ದ ಯು. ಮಹಮ್ಮದ್ ಅವರ ಕಾರು ಮೊದಲು ರಸ್ತೆ ಬದಿಯಲ್ಲಿ ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದು, ಬಳಿಕ ದುರಸ್ತಿಗೆ ನಿಲ್ಲಿಸಿದ್ದ ಕ್ರೇನ್‌ಗೆ ಅಪ್ಪಳಿಸಿದೆ.

 

ಅಪಘಾತದ ತೀವ್ರತೆಗೆ ನಿಂತಿದ್ದ ಕಾರು ಸುಮಾರು 100 ಮೀಟರ್ ದೂರಕ್ಕೆ ಎಸೆಯಲ್ಪಟ್ಟಿದೆ. ಆ ಸಮಯದಲ್ಲಿ ಕಾರಿನೊಳಗೆ ಯಾರೂ ಇಲ್ಲದಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ.

 

ಇನ್ನು ಡಿಕ್ಕಿಯ ರಭಸಕ್ಕೆ ಕ್ರೇನ್ ದುರಸ್ತಿ ಮಾಡುತ್ತಿದ್ದ ಮಾಧವ ಪಿಟ್ಟರ್ ಹಾಗೂ ಬೈಕ್‌ನಲ್ಲಿದ್ದ ಪುನೀತ್ ಸಜೀಪ ಅವರು ವಾಹನಗಳ ನಡುವೆ ಸಿಲುಕಿಕೊಂಡಿದ್ದರು. ತಕ್ಷಣ ಸ್ಥಳಕ್ಕೆ ಆಗಮಿಸಿದ ಸ್ಥಳೀಯರು ಹರಸಾಹಸಪಟ್ಟು ಇಬ್ಬರನ್ನೂ ಸುರಕ್ಷಿತವಾಗಿ ಹೊರತೆಗೆದಿದ್ದಾರೆ.