ಬಂಟ್ವಾಳ: ನೈಜ ಚಿನ್ನದ ಆಭರಣ ಮಾರಾಟ ಮಾಡುವುದಾಗಿ ನಂಬಿಸಿ ₹3.80 ಲಕ್ಷ ಪಡೆದು ನಕಲಿ ಚಿನ್ನ ನೀಡಲು ಯತ್ನಿಸಿದ ಘಟನೆ ಮಂಚಿ ಸಮೀಪದ ಕುಕ್ಕಾಜೆಯಲ್ಲಿ ನಡೆದಿದೆ. ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೈಸೂರಿನ ಯರಗನಹಳ್ಳಿ ನಿವಾಸಿ ಸಿ. ಮಹೇಶ್ ಕುಮಾರ್ ಅವರು ವಂಚನೆ ಯತ್ನದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.
ಜಾಹೀರಾತು ನೋಡಿ ಸಂಪರ್ಕಿಸಿದ್ದ ಆರೋಪಿ;
ಮಹೇಶ್ ಅವರು ಗೋಲ್ಡ್ ಕಂಪೆನಿಯೊಂದರಲ್ಲಿ ಚಿನ್ನದ ಖರೀದಿ ಮತ್ತು ಮಾರಾಟದ ವ್ಯವಹಾರ ನಡೆಸುತ್ತಿದ್ದರು. ಕಂಪೆನಿಯ ಜಾಹೀರಾತನ್ನು ಗಮನಿಸಿದ ಜಿಯಾದ್ ಎಂಬಾತ ನವೆಂಬರ್ 18ರಂದು ಸಂಪರ್ಕಿಸಿ, ತನ್ನ ಬಳಿ 37.2 ಗ್ರಾಂ ತೂಕದ ನೈಜ ಚಿನ್ನದ ಆಭರಣವಿದ್ದು, ಅದನ್ನು ಮಾರಾಟ ಮಾಡಲು ಇಚ್ಛಿಸಿರುವುದಾಗಿ ತಿಳಿಸಿದ್ದಾನೆ.
ಇದಕ್ಕೆ ಸಂಬಂಧಿಸಿದಂತೆ ತನ್ನ ಹಾಗೂ ಪತ್ನಿಯ ಆಧಾರ್ ಕಾರ್ಡ್ ವಿವರಗಳನ್ನು ಕಳುಹಿಸಿದ್ದಲ್ಲದೆ, ಚಿನ್ನದ ಆಭರಣದ ಫೋಟೋವನ್ನೂ ಮಹೇಶ್ ಅವರಿಗೆ ರವಾನಿಸಿದ್ದಾನೆ. ಇದನ್ನು ನಂಬಿದ ಮಹೇಶ್ ಕುಮಾರ್ ಅವರು ನವೆಂಬರ್ 20ರಂದು ಬೆಂಗಳೂರಿನಿಂದ ಬಿ.ಸಿ.ರೋಡ್ಗೆ ಆಗಮಿಸಿದ್ದರು.
ಹಣ ಪಾವತಿಸಿದ ಬಳಿಕ ನಕಲಿ ಚಿನ್ನದ ಅನುಮಾನ;
ಬಳಿಕ ಜಿಯಾದ್ ತನ್ನ ವಾಹನದಲ್ಲಿ ಮಹೇಶ್ ಅವರನ್ನು ಚಿತ್ರ ಆರಂಟಿದ ಸಹಕಾರಿ ಸಂಘವೊಂದಕ್ಕೆ ಕರೆದೊಯ್ದಿದ್ದಾನೆ. ಅಲ್ಲಿ ಚಿನ್ನದ ವ್ಯವಹಾರಕ್ಕೆ ಸಂಬಂಧಿಸಿದಂತೆ ಮಹೇಶ್ ಅವರು ಒಟ್ಟು ₹3.80 ಲಕ್ಷ ಹಣವನ್ನು ಪಾವತಿಸಿದ್ದಾರೆ. ಹಣ ಸ್ವೀಕರಿಸಿದ ಬಳಿಕ ಬ್ಯಾಂಕ್ ಸಿಬ್ಬಂದಿ ಜಿಯಾದ್ಗೆ ಚಿನ್ನದ ಆಭರಣವನ್ನು ಮರಳಿಸಿದ್ದಾರೆ ಎನ್ನಲಾಗಿದೆ.
ಈ ಸಂದರ್ಭದಲ್ಲಿ ಆಭರಣವನ್ನು ತಮ್ಮ ವಶಕ್ಕೆ ನೀಡುವಂತೆ ಮಹೇಶ್ ಕೇಳಿದಾಗ, ಗೇಟ್ ಬಳಿಗೆ ಬಂದು ಕೊಡುವುದಾಗಿ ಹೇಳಿ ಅವರನ್ನು ಅಲ್ಲಿಗೆ ಕರೆದುಕೊಂಡು ಹೋಗಿದ್ದಾನೆ.
ಆದರೆ, ಜಿಯಾದ್ ಮೊದಲು ಕಳುಹಿಸಿದ್ದ ಚಿನ್ನದ ಫೋಟೋ ಮತ್ತು ಬಳಿಕ ನೀಡಲು ಮುಂದಾದ ಆಭರಣವನ್ನು ಹೋಲಿಕೆ ಮಾಡಿದಾಗ ವ್ಯತ್ಯಾಸ ಕಂಡುಬಂದಿದೆ. ಇದರಿಂದ ಆಭರಣ ನೈಜ ಚಿನ್ನವಲ್ಲ, ನಕಲಿ ಚಿನ್ನವಾಗಿರಬಹುದು ಎಂಬ ಅನುಮಾನ ಮಹೇಶ್ ಅವರಿಗೆ ಬಂದಿದೆ.
ಹೀಗಾಗಿ ಆಭರಣ ಬೇಡ, ತಾವು ಪಾವತಿಸಿದ ಹಣವನ್ನು ವಾಪಸ್ ನೀಡುವಂತೆ ಕೇಳಿದ್ದಾರೆ. ಈ ವೇಳೆ ಬೇರೆ ಬ್ಯಾಂಕ್ನಲ್ಲಿ ಚಿನ್ನವನ್ನು ಅಡವಿಟ್ಟು ಹಣ ತಂದು ಕೊಡುವುದಾಗಿ ಜಿಯಾದ್ ಭರವಸೆ ನೀಡಿದ್ದಾನೆ ಎನ್ನಲಾಗಿದೆ.
ಆದರೆ ಹಣ ಹಿಂದಿರುಗಿಸದೆ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಲ್ಲದೆ, ತಮ್ಮ ಮೇಲೆ ಹಲ್ಲೆಯನ್ನೂ ನಡೆಸಿದ್ದಾನೆ ಎಂದು ಮಹೇಶ್ ಕುಮಾರ್ ದೂರಿನಲ್ಲಿ ಆರೋಪಿಸಿದ್ದಾರೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.





