23 November 2026 |

ಪುತ್ತೂರು, ಸುಳ್ಯ ಭಾಗದ ಕುಡಿಯುವ ನೀರಿನ ಸಮಸ್ಯೆಗೆ ಶೀಘ್ರ ಪರಿಹಾರ: ಬಂಟ್ವಾಳದ ಶಂಭೂರಿನಿಂದ ನೀರು ಪೂರೈಕೆ

  • 23 Nov 2026 11:16:13 AM

ಪುತ್ತೂರು: ಪುತ್ತೂರು ಮತ್ತು ಸುಳ್ಯ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಹಲವು ವರ್ಷಗಳಿಂದ ಎದುರಾಗುತ್ತಿರುವ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಒದಗಿಸುವ ಉದ್ದೇಶದಿಂದ ಆರಂಭಿಸಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅಂತಿಮ ಹಂತ ತಲುಪಿದೆ. ಬಂಟ್ವಾಳ ತಾಲೂಕಿನ ಶಂಭೂರಿನ ನೇತ್ರಾವತಿ ನದಿಯಿಂದ ನೀರನ್ನು ಸಂಗ್ರಹಿಸಿ ವಿವಿಧ ಗ್ರಾಮಗಳಿಗೆ ಪೂರೈಸುವ ಈ ಯೋಜನೆಯ ಕಾಮಗಾರಿ ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

 

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ಜಲ ಜೀವನ್ ಮಿಷನ್ ಯೋಜನೆಯಡಿ ಈ ಕಾಮಗಾರಿಯನ್ನು ಕೈಗೆತ್ತಿಕೊಂಡಿದೆ. ಸುಮಾರು 780 ಕೋಟಿ ರೂ. ವೆಚ್ಚದ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ದೊರೆತಿದೆ. ಸದ್ಯ ನೀರು ಶುದ್ಧೀಕರಣ ಘಟಕ ನಿರ್ಮಾಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಪೈಪ್‌ಲೈನ್ ಅಳವಡಿಸುವ ಕೆಲಸ ವೇಗವಾಗಿ ನಡೆಯುತ್ತಿದ್ದು, ಒಟ್ಟಾರೆ ಕಾಮಗಾರಿಯಲ್ಲಿ ಶೇ.70ರಷ್ಟು ಪ್ರಗತಿ ಸಾಧಿಸಲಾಗಿದೆ.

 

ವರ್ಷಪೂರ್ತಿ ನೀರು ಲಭ್ಯವಿರುವ ಸ್ಥಳದಲ್ಲಿ ಘಟಕ ನಿರ್ಮಾಣ;

ಬಂಟ್ವಾಳ ತಾಲೂಕಿನ ಶಂಭೂರು ಮತ್ತು ಬಾಳ್ತಿಲ ಗ್ರಾಮದ ಗಡಿ ಭಾಗದಲ್ಲಿರುವ ಕುಂದಾಯಗೋಳಿ ಪ್ರದೇಶದ ನೇತ್ರಾವತಿ ನದಿ ತೀರದಲ್ಲಿ ಜಾಕ್‌ವೆಲ್ ಹಾಗೂ ನೀರು ಶುದ್ಧೀಕರಣ ಘಟಕ ನಿರ್ಮಿಸಲಾಗುತ್ತಿದೆ.

 

ಶಂಭೂರಿನ ಎಎಂಆರ್ ಡ್ಯಾಮ್‌ನ ಹಿನ್ನೀರನ್ನು ಬಳಸಿಕೊಂಡು ನೀರು ಸಂಗ್ರಹಿಸಲಾಗುತ್ತದೆ. ಈ ಪ್ರದೇಶದಲ್ಲಿ ವರ್ಷವಿಡೀ ನದಿಯಲ್ಲಿ ನೀರಿನ ಲಭ್ಯತೆ ಇರುವುದರಿಂದ ನೀರು ಎತ್ತುವ ವ್ಯವಸ್ಥೆ ಮತ್ತು ಶುದ್ಧೀಕರಣ ಘಟಕವನ್ನು ಇದೇ ಸ್ಥಳದಲ್ಲಿ ಸ್ಥಾಪಿಸಲಾಗುತ್ತಿದೆ.

 

ಸಾವಿರಾರು ಜನವಸತಿ ಪ್ರದೇಶಗಳಿಗೆ ನೀರು ಪೂರೈಕೆ;

ಈ ಯೋಜನೆಯ ಮೂಲಕ ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯೂ ಸೇರಿದಂತೆ ಅಳಿಕೆ ಭಾಗದ 123 ಜನವಸತಿ ಪ್ರದೇಶಗಳಿಗೆ ನೀರು ಒದಗಿಸಲಾಗುತ್ತದೆ.

 

ಇದರೊಂದಿಗೆ ಪುತ್ತೂರು ತಾಲೂಕಿನ 319, ಕಡಬ ತಾಲೂಕಿನ 51 ಹಾಗೂ ಸುಳ್ಯ ತಾಲೂಕಿನ 243 ಜನವಸತಿ ಪ್ರದೇಶಗಳು ಯೋಜನೆಯ ಪ್ರಯೋಜನ ಪಡೆಯಲಿವೆ.

 

ಜಾಕ್‌ವೆಲ್ ಮತ್ತು ನೀರು ಶುದ್ಧೀಕರಣ ಘಟಕದ ನಿರ್ಮಾಣದ ಜವಾಬ್ದಾರಿಯನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಬಂಟ್ವಾಳ ಉಪವಿಭಾಗ ವಹಿಸಿಕೊಂಡಿದೆ. ಉಳಿದಂತೆ ಆಯಾ ತಾಲೂಕುಗಳ ಅಧಿಕಾರಿಗಳು ನೀರಿನ ಟ್ಯಾಂಕ್ ನಿರ್ಮಾಣ ಮತ್ತು ಪೈಪ್‌ಲೈನ್ ಅಳವಡಿಕೆ ಕಾಮಗಾರಿಗಳನ್ನು ನಿರ್ವಹಿಸುತ್ತಿದ್ದಾರೆ. ಮನೆಗಳಿಗೆ ನೀರು ತಲುಪಿಸುವ ವ್ಯವಸ್ಥೆಯನ್ನು ಸ್ಥಳೀಯ ಗ್ರಾಮ ಪಂಚಾಯತ್‌ಗಳು ನೋಡಿಕೊಳ್ಳಲಿವೆ.

 

ಡಿಸೆಂಬರ್ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳಿಸುವ ಗುರಿ;

ಶಂಭೂರಿನಲ್ಲಿ ನಿರ್ಮಾಣವಾಗುತ್ತಿರುವ ನೀರು ಶುದ್ಧೀಕರಣ ಘಟಕದ ಕಾಮಗಾರಿ ಈಗಾಗಲೇ ಶೇ.70ರಷ್ಟು ಮುಗಿದಿದೆ. ಡಿಸೆಂಬರ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸುವ ನಿರೀಕ್ಷೆಯಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಬಂಟ್ವಾಳದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ನಟೇಶ್ ಕುಮಾರ್ ತಿಳಿಸಿದ್ದಾರೆ.

 

ಈ ಯೋಜನೆ ಪೂರ್ಣಗೊಂಡ ಬಳಿಕ ಪುತ್ತೂರು, ಕಡಬ, ಸುಳ್ಯ ಸೇರಿದಂತೆ ಹಲವು ಗ್ರಾಮೀಣ ಪ್ರದೇಶಗಳ ಜನರಿಗೆ ಕುಡಿಯುವ ನೀರಿನ ಪೂರೈಕೆಯಲ್ಲಿ ಅನುಕೂಲವಾಗುವ ನಿರೀಕ್ಷೆಯಿದೆ.