23 November 2026 |

ಕಾಪು ಬೀಚ್‌ನಲ್ಲಿ ಭೀಕರ ದುರಂತ: ಸಮುದ್ರದ ಅಲೆಗಳಿಗೆ ಸಿಲುಕಿ ಐವರ ಪೈಕಿ ಮೂವರ ರಕ್ಷಣೆ, ಇಬ್ಬರು ಯುವಕರು ನಾಪತ್ತೆ!

  • 23 Nov 2026 11:19:16 AM

ಕಾಪು: ಪ್ರವಾಸಕ್ಕೆಂದು ಕಾಪು ಬೀಚ್‌ಗೆ ಬಂದಿದ್ದ ದಾವಣಗೆರೆ ಮೂಲದ ಕುಟುಂಬಕ್ಕೆ ಭಾನುವಾರ ಸಂಜೆ ಭೀಕರ ದುರಂತ ಎದುರಾಗಿದೆ. ಸಮುದ್ರದಲ್ಲಿ ಈಜಾಡುತ್ತಿದ್ದ ಐವರು ಯುವಕರು ಏಕಾಏಕಿ ಅಪ್ಪಳಿಸಿದ ಬೃಹತ್ ಅಲೆಗಳ ಹೊಡೆತಕ್ಕೆ ಸಿಲುಕಿದ್ದು, ಈ ಪೈಕಿ ಮೂವರನ್ನು ರಕ್ಷಿಸಲಾಗಿದೆ. ಉಳಿದ ಇಬ್ಬರು ಯುವಕರು ನಾಪತ್ತೆಯಾಗಿದ್ದು, ನೀರಿನಲ್ಲಿ ಮುಳುಗಿರುವ ಶಂಕೆ ವ್ಯಕ್ತವಾಗಿದೆ.

 

ಭಾನುವಾರ ಸಂಜೆ ಈ ಘಟನೆ ನಡೆದಿದ್ದು, ಸಮುದ್ರದ ಅಬ್ಬರದ ಅಲೆಗಳು ಐವರು ಯುವಕರನ್ನು ದಡದಿಂದ ದೂರಕ್ಕೆ ಎಳೆದೊಯ್ದಿವೆ ಎನ್ನಲಾಗಿದೆ. ಘಟನೆಯನ್ನು ಗಮನಿಸಿದ ಸ್ಥಳೀಯರು ಹಾಗೂ ರಕ್ಷಣಾ ತಂಡ ತಕ್ಷಣ ಕಾರ್ಯಾಚರಣೆ ನಡೆಸಿ ಮೂವರನ್ನು ಸುರಕ್ಷಿತವಾಗಿ ದಡಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.

 

ರಕ್ಷಿಸಲ್ಪಟ್ಟ ಮೂವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಉಚ್ಚಿಲದ ಎಸ್‌ಡಿಪಿಐ ಆಂಬ್ಯುಲೆನ್ಸ್ ಮೂಲಕ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಆಸ್ಪತ್ರೆಗೆ ಸಾಗಿಸಲಾಗಿದೆ. ನಾಪತ್ತೆಯಾಗಿರುವ ಇಬ್ಬರು ಯುವಕರಿಗೆ 20 ಮತ್ತು 15 ವರ್ಷ ವಯಸ್ಸಾಗಿದ್ದು, ಅವರಿಗಾಗಿ ಸಮುದ್ರದಲ್ಲಿ ಶೋಧ ಕಾರ್ಯ ಮುಂದುವರಿದಿದೆ.

 

ದಾವಣಗೆರೆಯಿಂದ ಕುಟುಂಬವೊಂದು ಪ್ರವಾಸಕ್ಕಾಗಿ ಕಾಪುಗೆ ಆಗಮಿಸಿತ್ತು. ಈ ಕುಟುಂಬದ ಯುವಕರ ಪೈಕಿ ಒಬ್ಬರು ಉಡುಪಿಯಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದು, ಅವರನ್ನು ಭೇಟಿಯಾಗಲು ಕುಟುಂಬಸ್ಥರು ಬಂದಿದ್ದರು ಎಂದು ತಿಳಿದುಬಂದಿದೆ.

 

ವಿಷಯ ತಿಳಿದ ಕೂಡಲೇ ಕಾಪು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ನಾಪತ್ತೆಯಾದ ಇಬ್ಬರು ಯುವಕರ ಪತ್ತೆಗಾಗಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.