26 November 2026 |

ಬಂಟ್ವಾಳ: ಪಾಣೆಮಂಗಳೂರು ಹಳೆ ಸೇತುವೆಯಲ್ಲಿ ಕಬ್ಬಿಣದ ಕಮಾನು ಮರುಸ್ಥಾಪನೆ; ಘನ ವಾಹನಗಳ ಸಂಚಾರಕ್ಕೆ ನಿರಾಳತೆ

  • 26 Nov 2026 12:52:23 PM

ಬಂಟ್ವಾಳ: ಪಾಣೆಮಂಗಳೂರಿನ ನೇತ್ರಾವತಿ ನದಿಯ ಹಳೆ ಸೇತುವೆಯಲ್ಲಿ ಸುಮಾರು ಎರಡು ತಿಂಗಳ ಹಿಂದೆ ಕುಸಿದು ಬಿದ್ದಿದ್ದ ಕಬ್ಬಿಣದ ಕಮಾನನ್ನು ಬಂಟ್ವಾಳ ಪುರಸಭೆ ಮತ್ತೆ ಮರುಸ್ಥಾಪಿಸಿದೆ. ಬುಧವಾರ ನಡೆದ ಕಾಮಗಾರಿ ಯಶಸ್ವಿಯಾಗಿದ್ದು, ಇದರಿಂದ ಘನ ವಾಹನಗಳ ಚಾಲಕರು ಎದುರಿಸುತ್ತಿದ್ದ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ದೊರೆತಂತಾಗಿದೆ.

 

ಬುಧವಾರ ಬೆಳಗ್ಗೆಯೇ ಕಮಾನು ಅಳವಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು. ಭಾರೀ ತೂಕ ಮತ್ತು ಗಾತ್ರ ಹೊಂದಿದ್ದ ಕಮಾನನ್ನು ಬುಲ್ಲೋಜರ್ ಮೂಲಕ ಮೇಲಕ್ಕೆತ್ತಿ ಜೋಡಿಸಲು ಮೊದಲಿಗೆ ಪ್ರಯತ್ನಿಸಲಾಯಿತು. ಆದರೆ ಈ ಪ್ರಯತ್ನ ಫಲ ನೀಡದ ಹಿನ್ನೆಲೆಯಲ್ಲಿ ಕ್ರೇನ್ ಬಳಸಿ ಕಮಾನನ್ನು ಯಶಸ್ವಿಯಾಗಿ ಅದರ ಹಿಂದಿನ ಸ್ಥಾನದಲ್ಲಿ ಅಳವಡಿಸಲಾಯಿತು. ಈ ಕಾರ್ಯಕ್ಕೆ ಬಂಟ್ವಾಳ ಪುರಸಭೆಯ ನಿಕಟಪೂರ್ವ ಸದಸ್ಯ ಇದ್ರೀಸ್ ಪಿ.ಜೆ. ಸೇರಿದಂತೆ ಸ್ಥಳೀಯರು ಸಹಕಾರ ನೀಡಿದರು.

 

ನೇತ್ರಾವತಿ ನದಿಯ ಹಳೆ ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದರಿಂದ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಸೇತುವೆಯ ಎರಡೂ ಬದಿಗಳಲ್ಲಿ ಘನ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಈ ಉದ್ದೇಶಕ್ಕಾಗಿ ಕಬ್ಬಿಣದ ಕಮಾನುಗಳನ್ನು ಅಳವಡಿಸಲಾಗಿತ್ತು. ಆದರೆ, ವಾಹನಗಳು ಪದೇಪದೇ ಕಮಾನಿಗೆ ಡಿಕ್ಕಿ ಹೊಡೆಯುತ್ತಿದ್ದ ಪರಿಣಾಮ ಈ ಹಿಂದೆ ಅಳವಡಿಸಿದ್ದ ಕಮಾನುಗಳು ಹಾನಿಗೊಳಗಾಗಿ ಕುಸಿದಿದ್ದವು. ನಂತರ ಸ್ಥಳೀಯಾಡಳಿತ ಬಲಿಷ್ಠ ಕಬ್ಬಿಣದ ಕಮಾನನ್ನು ಅಳವಡಿಸಿತ್ತು. ಆದರೂ ಸೆಪ್ಟೆಂಬರ್ 3ರ ಮುಂಜಾನೆ ಗೂಡಿನಬಳಿ ಭಾಗದ ಕಮಾನು ಏಕಾಏಕಿ ನೆಲಕ್ಕುರುಳಿತ್ತು.

 

ಕಮಾನು ಕುಸಿದಿರುವ ವಿಷಯ ತಿಳಿಯದೆ ಘನ ವಾಹನಗಳು ಸೇತುವೆ ಪ್ರವೇಶಿಸುತ್ತಿದ್ದವು. ಎದುರಿನ ಭಾಗದಲ್ಲೂ ಕಮಾನು ಇದ್ದ ಕಾರಣ ವಾಹನಗಳು ಮುಂದೆ ಹೋಗಲು ಸಾಧ್ಯವಾಗದೆ, ಅನಿವಾರ್ಯವಾಗಿ ಹಿಮ್ಮುಖವಾಗಿ ಹಿಂದಿರುಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.

 

ಇದೀಗ ಎರಡು ತಿಂಗಳ ಬಳಿಕ ಕಮಾನು ಮತ್ತೆ ಅಳವಡಿಕೆಯಾಗಿರುವುದರಿಂದ ಘನ ವಾಹನಗಳ ಚಾಲಕರಿಗೆ ಎದುರಾಗಿದ್ದ ಗೊಂದಲ ಕಡಿಮೆಯಾಗಿದ್ದು, ಸ್ಥಳೀಯರು ಹಾಗೂ ವಾಹನ ಸವಾರರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.