ಮಂಗಳೂರು: ನಗರದ ರಾಷ್ಟ್ರೀಯ ಹೆದ್ದಾರಿ 66ರ ಪಂಪ್‌ವೆಲ್ ಸಮೀಪದ ಉದ್ಯೋಡಿ ಗೋರಿಗುಡ್ಡ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ನರ್ಸಿಂಗ್ ವಿದ್ಯಾರ್ಥಿನಿ ಜ್ಯೋತಿ (19) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಜಿಎನ್‌ಎಂ ನರ್ಸಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದ ಜ್ಯೋತಿ, ಮುಂದಿನ ದಿನಗಳಲ್ಲಿ ಉದ್ಯೋಗ ಪಡೆದು ಕುಟುಂಬಕ್ಕೆ ಆಸರೆಯಾಗುವ ಕನಸು ಹೊಂದಿದ್ದರು. ಆದರೆ ದುರದೃಷ್ಟವಶಾತ್ ಆಕೆಯ ಕನಸು ನನಸಾಗುವ ಮುನ್ನವೇ ಜೀವನ ಅಂತ್ಯಗೊಂಡಿದೆ.
ನವೆಂಬರ್ 14ರಂದು ಬೆಳಿಗ್ಗೆ ಜ್ಯೋತಿ ಹಾಗೂ ಅವರ ಸಂಬಂಧಿ ನಂದಿನಿ (19) ಅವರು ಉದ್ಯೋಡಿ ಗೋರಿಗುಡ್ಡ ಬಳಿ ರಾಷ್ಟ್ರೀಯ ಹೆದ್ದಾರಿಯ ರಸ್ತೆ ವಿಭಜಕವನ್ನು ದಾಟಿ ನಡೆದುಕೊಂಡು ಹೋಗುತ್ತಿದ್ದರು. ಈ ಸಂದರ್ಭದಲ್ಲಿ ತೊಕ್ಕೊಟ್ಟು ಕಡೆಯಿಂದ ನಂತೂರು ದಿಕ್ಕಿನಲ್ಲಿ ವೇಗವಾಗಿ ಬರುತ್ತಿದ್ದ ಬೈಕ್ ಇಬ್ಬರಿಗೂ ಡಿಕ್ಕಿ ಹೊಡೆದಿದೆ.
ಘಟನೆಯಿಂದ ಜ್ಯೋತಿ ಮತ್ತು ನಂದಿನಿ ತೀವ್ರವಾಗಿ ಗಾಯಗೊಂಡಿದ್ದು, ಬೈಕ್ ಸವಾರರಿಗೂ ಗಾಯಗಳಾಗಿದ್ದವು. ಕೂಡಲೇ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಗಂಭೀರ ಸ್ಥಿತಿಯಲ್ಲಿದ್ದ ಜ್ಯೋತಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದರೂ, ವೈದ್ಯರ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.





