ಮಂಗಳೂರು: ಆಟೋ ರಿಕ್ಷಾ ಮತ್ತು ದ್ವಿಚಕ್ರ ವಾಹನದ ನಡುವೆ ಡಿಕ್ಕಿಯಾಗಿ ಯುವಕ ಸಾವನ್ನಪ್ಪಿದ ಘಟನೆ ಮಂಗಳೂರಿನ ಯಯ್ಯಾಡಿ ಬಳಿ ನಡೆದಿದೆ. ಕೌಶಿಕ್ (27 ವ) ಮೃತ ಪಟ್ಟ ಯುವಕ ಎಂದು ತಿಳಿದು ಬಂದಿದೆ.
ಆಟೋರಿಕ್ಷಾ ಕೆಪಿಟಿಯಿಂದ ಹರಿಪದವ್ ಕಡೆಗೆ ತೆರಳುತ್ತಿತ್ತು. ದ್ವಿಚಕ್ರ ವಾಹನ ಯಯ್ಯಾಡಿ ಮುಖ್ಯ ಜಂಕ್ಷನ್‌ನಿಂದ ಬಾರೆಬೈಲ್ ಕಡೆಗೆ ಸಾಗುತ್ತಿತ್ತು.
ಆಟೋ ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂದು ಆರೋಪಿಸಲಾಗಿದೆ. ಡಿಕ್ಕಿಯ ರಭಸಕ್ಕೆ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಕೌಶಿಕ್ ರಸ್ತೆಗೆ ಬಿದ್ದು, ಸಮೀಪದ ತರಕಾರಿ ಅಂಗಡಿ ಮುಂಭಾಗದಲ್ಲಿದ್ದ ಕಬ್ಬಿಣದ ಕಂಬಕ್ಕೆ ಡಿಕ್ಕಿ ಹೊಡೆದಿದ್ದಾರೆ.
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ವೈದ್ಯರು ಅದಾಗಲೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿದ್ದಾರೆ.