22 October 2025 | Join group

Polali Temple: ಪೊಳಲಿ ಕ್ಷೇತ್ರದಲ್ಲಿ ನವರಾತ್ರಿ ಸಂಭ್ರಮ

  • 01 Oct 2025 10:41:16 AM

ದಕ್ಷಿಣ ಕನ್ನಡ ಜಿಲ್ಲೆಯ ಅತ್ಯಂತ ಪುರಾತನ ದೇವಿ ಕ್ಷೇತ್ರಗಳಲ್ಲಿ ಒಂದಾದ ಬಂಟ್ವಾಳ ತಾಲೂಕಿನ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಹಿನ್ನಲೆಯಲ್ಲಿ ವಿಶೇಷ ಪೂಜೆ ಮತ್ತು ಸೇವೆಗಳನ್ನು ಆಯೋಜಿಸಲಾಗಿದೆ. ಎಂಟನೇ ಶತಮಾನಕ್ಕೆ ಸೇರಿದ ದೇವಸ್ಥಾನವಾಗಿರುವ ರಾಜರಾಜೇಶ್ವರಿ ಕ್ಷೇತ್ರವನ್ನು ರಾಜ ಸುರಥ ಎಂಬಾತನು ನಿರ್ಮಿಸಿದನು ಎನ್ನುವ ಉಲ್ಲೇಖವಿದೆ. ಇಲ್ಲಿ ವರ್ಷಕ್ಕೊಮ್ಮೆ ನಡೆಯುವ ವಾರ್ಷಿಕ ಜಾತ್ರೆ ಮತ್ತು ನವರಾತ್ರಿಯಂದು ನಡೆಯುವ ಉತ್ಸವಗಳಿಗೆ ಅತ್ಯಂತ ಮಹತ್ವವನ್ನು ನೀಡಲಾಗುತ್ತಿದೆ.

 

ನವರಾತ್ರಿ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ದೇವಿಗೆ ವಿಶೇಷ ಅಲಂಕಾರದ ಜೊತೆಗೆ ನಿತ್ಯಪೂಜೆಯನ್ನು ನೆರವೇರಿಸಲಾಗುತ್ತದೆ. ನವರಾತ್ರಿಯ ಒಂಬತ್ತು ದಿನಗಳಲ್ಲೂ ದೇವಿಯ ವಿಗ್ರಹದ ಸೀರೆಯನ್ನು ಬದಲಾಯಿಸಿ, ದಿನಕ್ಕೊಂದು ಬಣ್ಣದ ಸೀರೆಯನ್ನು ಉಡಿಸಲಾಗುತ್ತದೆ. ನವರಾತ್ರಿಯಂದು ಧಾರ್ಮಿಕ ವಿಧಿ- ವಿಧಾನಗಳ ಜೊತೆಗೆ ನಿರಂತರವಾಗಿ ಸುಮಾರು ಹತ್ತು ದಿನಗಳ ಕಾಲ ಸಾಂಸ್ಕøತಿಕ ಕಾರ್ಯಕ್ರಮಗಳನ್ನೂ ಇಲ್ಲಿ ಆಯೋಜಿಸಿಕೊಂಡು ಬರಲಾಗುತ್ತಿದೆ. ಪ್ರತಿದಿನ ಸಾವಿರಾರು ಸಂಖ್ಯೆಯ ಭಕ್ತಾಧಿಗಳು ಇಲ್ಲಿಗೆ ನವರಾತ್ರಿ ಸಂದರ್ಭದಲ್ಲಿ ರಾತ್ರಿ-ಹಗಲೆನ್ನದೇ ಭೇಟಿ ನೀಡಿ ದೇವಿಯ ಕೃಪೆಗೆ ಪಾತ್ರರಾಗುತ್ತಾರೆ. ಕ್ಷೇತ್ರದಲ್ಲಿ ದೇವಿ ರಾಜರಾಜೇಶ್ವರಿಯೇ ಪ್ರಮುಖ ಆಕರ್ಷಣೆಯಾಗಿದ್ದು, ಕ್ಷೇತ್ರದಲ್ಲಿ ಮಹಿಳಾ ಭಕ್ತರ ಸಂಖ್ಯೆಯೂ ಹೆಚ್ಚಾಗಿರುತ್ತದೆ.