ರಾಮನವಮಿಯು ಯಾಕೆ ಆಚರಿಸಲಾಗುತ್ತದೆ ಮತ್ತು ಆಚರಣೆಯ ಮಹತ್ವ

  • 06 Apr 2025 04:12:55 PM

ಚಿತ್ರದ ಕೊಡುಗೆ : unsplash

Shri Rama Navami, April 06, 2025 : ಧರ್ಮ ಶಾಸ್ತ್ರಗಳ ಪ್ರಕಾರ, ಅಯೋಧ್ಯೆಯ ರಾಜನಾದ ದಶರಥನಿಗೆ ಕೌಶಲ್ಯ, ಕೈಕೇಯಿ ಹಾಗೂ ಸುಮಿತ್ರೆ ಈ ಮೂವರು ಪತ್ನಿಯರಿದ್ದರು. ಆದರೆ ಯಾರಿಗೂ ಪುತ್ರ ಸಂತಾನವಾಗಿರಲಿಲ್ಲ. ನಂತರ ದಶರಥನು ಋಷಿ ಮುನಿಗಳ ಸಲಹೆಯಂತೆ, ಪುತ್ರಕಾಮೇಷ್ಟಿ ಯಾಗವನ್ನು ಮಾಡಿಸುತ್ತಾರೆ. ಈ ಯಜ್ಞದಿಂದ ಸಂತುಷ್ಟನಾದ ಪ್ರಜಾಪತಿಯು ದಶರಥನಿಗೆ ದಿವ್ಯ ಪಾಯಸವನ್ನು ನೀಡುತ್ತಾನೆ. ಈ ದಿವ್ಯ ಪಾಯಸವನ್ನು ತನ್ನ ಮೂವರು ಪತ್ನಿಯರಿಗೆ ಕೂಡ ಹಂಚುತ್ತಾನೆ.

 

ಇದರಂತೆ ಚೈತ್ರ ಮಾಸದ ಶುಕ್ಲ ಪಕ್ಷದ ನವಮಿ ತಿಥಿಯಂದು ಮಧ್ಯಾಹ್ನ ಪುನರ್ವಸು ನಕ್ಷತ್ರದಲ್ಲಿ ಕೌಶಲ್ಯಗೆ ರಾಮನೂ, ಪುಷ್ಯ ನಕ್ಷತ್ರದ ದಶಮಿಯಂದು ಸೂರ್ಯೋದಯಕ್ಕೆ ಮುನ್ನ ಕೈಕೇಯಿಗೆ ಭರತನು ಮತ್ತು ಅದೇ ದಿನ ಆಶ್ಲೇಷ ನಕ್ಷತ್ರದಲ್ಲಿ ಮಧ್ಯಾಹ್ನ ಲಕ್ಷ್ಮಣ, ಶತ್ರುಘ್ನನು ಜನಿಸುತ್ತಾರೆ. ಹೀಗೆ, ರಾಮನು ಜನಿಸಿದ ನವಮಿಯಂದು, ರಾಮನವಮಿಯಾಗಿ ಆಚರಿಸುತ್ತಾರೆ.

 

ರಾಮನವಮಿಯ ಮಹತ್ವ

ಶ್ರೀರಾಮನು ಜನಿಸಿದ ದಿನದಂದು ಆಚರಿಸಲಾಗುವ ಹಬ್ಬವೇ ರಾಮನವಮಿ. ಅಯೋಧ್ಯಾ ರಾಜ ದಶರಥ ಹಾಗೂ ಕೌಶಲ್ಯ ಪುತ್ರನಾದ ಮಹಾವಿಷ್ಣುವಿನ ಏಳನೇ ಅವತಾರದಲ್ಲಿ ಶ್ರೀ ರಾಮನ ಜನನವಾಗುತ್ತದೆ. ಹಿಂದೂ ಗ್ರಂಥಗಳಲ್ಲಿ ಉಲ್ಲೇಖವಾದಂತೆ, ನಾಲ್ಕು ಯುಗಗಳಲ್ಲಿ ಒಂದಾದ ತ್ರೇತಾ ಯುಗದಲ್ಲಿ ಶ್ರೀ ರಾಮನು ಜನಿಸುತ್ತಾನೆ.

 

ಈ ದಿನ ಶ್ರೀ ರಾಮನನ್ನು ಪೂಜಿಸಿದರೆ, ಕೆಟ್ಟ ಶಕ್ತಿಗಳು ನಿವಾರಣೆಯಾಗಲಿದೆ ಮತ್ತು ಭೂಮಿಯ ಮೇಲೆ ದೈವಿಕ ಶಕ್ತಿಯು ನೆಲೆಸುತ್ತದೆ. ಶ್ರೀ ರಾಮ ನವಮಿಯಂದು ಶ್ರೀ ರಾಮತ್ವವು ಎಂದಿಗಿಂತಲೂ ಸಾವಿರ ಪಟ್ಟು ಭೂಮಿಯಲ್ಲಿ ಕಾರ್ಯನಿರತವಾಗಿರುತ್ತದೆ. ಹೀಗಾಗಿ ಈ ದಿನ ರಾಮನಾಮ ಜಪ, ಶ್ರೀ ರಾಮನ ಉಪಸನ ಮಾಡುವುದರಿಂದ ಸಾಕಷ್ಟು ಪ್ರಯೋಜನ ಪಡೆಯಬಹುದೆಂದು ಹೇಳಲಾಗುತ್ತದೆ.

 

ಶ್ರೀ ರಾಮನವಮಿ ಆಚರಣೆಯ ಯಾಕೆ ?

ಇನ್ನು ರಾಮನವಮಿಯ ಆದ್ಯಾತ್ಮಿಕ ವಿಚಾರಕ್ಕೆ ಬಂದರೆ, ರಾಮ ಎನ್ನುವ ಎರಡು ಅಕ್ಷರಗಳಲ್ಲಿ ಮಹತ್ವಪೂರ್ಣವಾದ ಅರ್ಥವಿದೆ. "ರಾ" ಎಂದರೆ ಬೆಳಕು ಮತ್ತು "ಮ" ಎಂದರೆ ಒಳಗೆ ಅಂದರೆ ನಿಮ್ಮೊಳಗಿನ ದೈಹಿಕ ಬೆಳಕು ಎಂದರ್ಥ.

 

ರಾಮನನವಮಿಯ ನಂಬಿಕೆಯ ಪ್ರಕಾರ, ಶ್ರೀ ರಾಮನು ಚೈತ್ರ ಮಾಸದ ಶುಕ್ಲ ಪಕ್ಷದ 9ನೇ ದಿನದಂದು ಜನಿಸಿದರು. ಆದ್ದರಿಂದ ಆ ದಿನವನ್ನು ರಾಮನವಮಿ ಎಂದು ಬಹಳ ಸಡಗರ, ಸಂಭ್ರಮ ಮತ್ತು ಧಾರ್ಮಿಕವಾಗಿ ಆಚರಿಸಲಾಗುವುದು. ಈ ದಿನದಂದು ಸಿದ್ಧಿಧಾತ್ರಿ ದೇವಿಯನ್ನು ಪೂಜಿಸುವುದಕ್ಕೆ ವಿಶೇಷ ಮಹತ್ವವಿದೆ. ಶ್ರೀ ರಾಮನ ಜನ್ಮ ದಿನದಂದು ಆತನನ್ನು ಭಕ್ತಿಯಿಂದ ಪೂಜಿಸುವುದರಿಂದ ಎಲ್ಲಾ ರೀತಿಯ ಸಂತೋಷ ಮತ್ತು ಜೀವನದಲ್ಲಿ ಸಮೃದ್ಧಿ ಸಿಗಲಿದೆ.