ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಚಂದ್ರದ್ರೋಣ ಪರ್ವತದಲ್ಲಿ 'ದತ್ತಮಾಲೆ ಅಭಿಯಾನ' ಮತ್ತು 'ದತ್ತ ಜಯಂತಿ'ಯ ನವೆಂಬರ್ 26 ರಿಂದ ಡಿಸೆಂಬರ್ 4ರ ವರೆಗೆ ಆಚರಿಸಲಾಗುವುದು.
ವಿಶ್ವ ಹಿಂದೂ ಪರಿಷತ್, ಬಜರಂಗದಳ ಪ್ರಾಂತ ಸಂಯೋಜಕ ಎಸ್. ಆರ್. ಪ್ರಭಂಜನ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಹೈಕೋರ್ಟ್ ನಿರ್ದೇಶನದ ಅನುಸಾರ ದತ್ತಪೀಠದಲ್ಲಿ ಹೋಮ, ಹವನ ಪೂಜೆ ನಡೆಯಲಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ದತ್ತ ಜಯಂತಿ ಉತ್ಸವ ನಡೆಯಲಿದೆ. ಡಿಸೆಂಬರ್ 3ರಂದು ಚಿಕ್ಕಮಗಳೂರಿನಲ್ಲಿ ಬೃಹತ್ ಶೋಭಾ ಯಾತ್ರೆ ನಡೆಯಲಿದೆ. ಆಜಾದ್ ಪಾರ್ಕ್ ನ ವೃತ್ತದಲ್ಲಿ ನಡೆಯುವ ಧಾರ್ಮಿಕ ಸಭೆಯಲ್ಲಿ ವಿಶ್ವ ಹಿಂದೂ ಪರಿಷತ್ ಅಖಿಲ ಭಾರತೀಯ ಕಾರ್ಯದರ್ಶಿ ಗೋಪಾಲ್ ನಾಗರಕಟ್ಟೆ ಭಾಗವಹಿಸಲಿದ್ದಾರೆ.
ದತ್ತ ಜಯಂತಿ ನಾಡ ಉತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ನಡೆಸಲಿದ್ದು, ಸಾಧು ಸಂತರು, ಮಾತೆಯರು, ದತ್ತ ಮಾಲಾಧಾರಿಗಳು, ಭಕ್ತರು ಸೇರಿದಂತೆ ರಾಜ್ಯಾದ್ಯಂತ ಸುಮಾರು 25 ಸಾವಿರ ದತ್ತ ಮಾಲಾಧಾರಿಗಳು ಆಗಮಿಸಲಿದ್ದಾರೆ. ಅನುಸೂಯ ದೇವಿ ಪೂಜೆ ಅಂಗವಾಗಿ ಡಿಸೆಂಬರ್ 2ರಂದು ನಗರದ ಬೋಳ ರಾಮೇಶ್ವರ ದೇವಾಲಯದ ಆವರಣದಲ್ಲಿ ಧಾರ್ಮಿಕ ಸಭೆ ನಂತರ ಮಹಿಳೆಯರಿಂದ ಸಂಕೀರ್ತನ ಯಾತ್ರೆ ನಡೆಯಲಿದೆ.
 
                            
 
                            



