31 October 2025 | Join group

ಕಡೇಶಿವಾಲಯ: ಗ್ರಾಮದ ಭಕ್ತಾದಿಗಳು ಸಮಾನ ಮನಸ್ಕರಾಗಿ ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಮಾತ್ರ ಜೀರ್ಣೋದ್ದಾರ ಸಾಧ್ಯ – ಮಾಣಿಲ ಶ್ರೀ

  • 27 Oct 2025 09:21:58 PM

ಕಡೇಶಿವಾಲಯ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಡೇಶಿವಾಲಯ ಗ್ರಾಮದ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ, ದಿನಾಂಕ 26-10-2025 ರ ಭಾನುವಾರ ದೇವಸ್ಥಾನದ ಜೀರ್ಣೋದ್ದಾರ ಪೂರ್ವಭಾವಿ ಸಭೆ ನಡೆಯಿತು.

 

ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಮಾಣಿಲದ ಶ್ರೀ ಶ್ರೀ ಶ್ರೀ ಮೋಹನದಾಸ ಸ್ವಾಮೀಜಿ ಅವರು ಆಶೀರ್ವಚನ ನೀಡಿ, “ಗ್ರಾಮದ ಭಕ್ತಾದಿಗಳು ಸಮಾನ ಮನಸ್ಕರಾಗಿ ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಮಾತ್ರ ದೇವಸ್ಥಾನದ ಜೀರ್ಣೋದ್ದಾರ ಸಾಧ್ಯ” ಎಂಬ ಸಂದೇಶ ನೀಡಿದರು.

 

ಸಭೆಯ ಅಧ್ಯಕ್ಷತೆಯನ್ನು ಕ್ಷೇತ್ರದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಶ್ರೀ ಪುರುಷೋತ್ತಮ ಶೆಟ್ಟಿ ನುಳಿಯಾಲು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕ್ಷೇತ್ರದ ತಂತ್ರಿಗಳಾದ ಉಚ್ಚಿಲಂತಾಯ ನೀಲೇಶ್ವರ ಪದ್ಮನಾಭ ತಂತ್ರಿಗಳು ಹಾಗೂ ವಾಸ್ತು ತಜ್ಞ ಕೃಷ್ಣರಾಜ ತಂತ್ರಿ ಕುಡುಪು ಉಪಸ್ಥಿತರಿದ್ದರು.

 

ಸಭೆಯಲ್ಲಿ ಜೀರ್ಣೋದ್ದಾರ ಕಾರ್ಯ ಕುರಿತು ಭಕ್ತಾದಿಗಳೊಂದಿಗೆ ಸಂವಾದ ನಡೆಸಲಾಗಿದ್ದು, ಜೀರ್ಣೋದ್ದಾರ ಸಮಿತಿಗೆ 45 ಮಂದಿ ಸದಸ್ಯರ ಪಟ್ಟಿಯನ್ನು ಸಭೆಯಲ್ಲಿ ಓದಲಾಗಿತ್ತು. ಇದಕ್ಕೆ ಸರ್ವಾನುಮತದ ಒಪ್ಪಿಗೆ ಪಡೆಯಲಾಯಿತು. ದೇವಸ್ಥಾನದ ಸಮಗ್ರ ಜೀರ್ಣೋದ್ದಾರದ ಕುರಿತು ತಂತ್ರಿಗಳಾದ ಪದ್ಮನಾಭ ತಂತ್ರಿ ಮತ್ತು ವಾಸ್ತು ತಜ್ಞ ಕೃಷ್ಣರಾಜ ತಂತ್ರಿ ಕುಡುಪು ವಿವರವಾದ ಮಾಹಿತಿ ನೀಡಿದರು.

 

ಸಭೆಯ ಆರಂಭದಲ್ಲಿ ವ್ಯವಸ್ಥಾಪನಾ ಸಮಿತಿಯ ಸದಸ್ಯ ಶೀನ ನಾಯ್ಕ ನೆಕ್ಕಿಲಾಡಿ ಸ್ವಾಗತಿಸಿ, ಸದಸ್ಯ ಈಶ್ವರ ಪೂಜಾರಿ ಹಿರ್ತಡ್ಕ ವಂದಿಸಿದರು. ಸದಸ್ಯರಾದ ಸತೀಶ್ಚಂದ್ರ ಶೆಟ್ಟಿ ಬಾವಗುತ್ತು, ಸಂಜೀವ ಪೂಜಾರಿ ದಾಸಕೋಡಿ, ಪ್ರೇಮ ಶಿವಪ್ರಸಾದ್ ಶೆಟ್ಟಿ, ಚಿದಾನಂದ ವಕೀಲರು ಸೇರಿದಂತೆ ಕಡೇಶಿವಾಲಯ ಊರಿನ ಗಣ್ಯರು ಉಪಸ್ಥಿತರಿದ್ದರು.