26 July 2026 |

ಎರಡನೇ ಟಿ20ಗೆ ಸಜ್ಜಾದ ಭಾರತ; ಗೆದ್ದರೆ ಸರಣಿ ಟೀಮ್ ಇಂಡಿಯಾ ವಶ

  • 25 Jul 2026 11:42:04 AM

ಹರಾರೆ: ಜಿಂಬಾಬೈ ವಿರುದ್ಧದ ಟಿ20 ಸರಣಿಯಲ್ಲಿ ಶುಭಾರಂಭ ಮಾಡಿರುವ ಟೀಮ್ ಇಂಡಿಯಾ ಇದೀಗ ಸರಣಿ ಗೆಲುವಿನತ್ತ ಚಿತ್ತ ಹರಿಸಿದೆ. ಶನಿವಾರ ನಡೆಯಲಿರುವ ಎರಡನೇ ಟಿ20 ಪಂದ್ಯದಲ್ಲಿ ಜಯ ಸಾಧಿಸಿದರೆ ಭಾರತ ಸರಣಿಯನ್ನು ತನ್ನದಾಗಿಸಿಕೊಳ್ಳಲಿದೆ. ನಾಯಕನಾಗಿ ಮೊದಲ ಗೆಲುವು ದಾಖಲಿಸಿರುವ ಶ್ರೇಯಸ್ ಅಯ್ಯರ್ ಇದೀಗ ತನ್ನ ಚೊಚ್ಚಲ ಸರಣಿ ಜಯದ ನಿರೀಕ್ಷೆಯಲ್ಲಿದ್ದಾರೆ.

 

ಮೊದಲ ಪಂದ್ಯದಲ್ಲಿ ಭಾರತ ಎಲ್ಲ ವಿಭಾಗಗಳಲ್ಲೂ ಪ್ರಾಬಲ್ಯ ಮೆರೆದಿತ್ತು. ಆರಂಭದಲ್ಲೇ ಅಭಿಷೇಕ್ ಶರ್ಮ ಕೇವಲ 1 ರನ್‌ಗೆ ವಿಕೆಟ್ ಒಪ್ಪಿಸಿದರೂ, ಬಳಿಕ ತಂಡ ಯಾವುದೇ ಆತಂಕವಿಲ್ಲದೆ ಗುರಿ ತಲುಪಿತು. ವೈಭವ್ ಸೂರ್ಯವಂಶಿ ಸಿಡಿಸಿದ ವೇಗದ ದಾಖಲೆಯ ಅರ್ಧಶತಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು. ಪರಿಣಾಮ ಭಾರತ ಇನ್ನೂ 6.4 ಓವರ್‌ಗಳು ಬಾಕಿ ಇರುವಾಗಲೇ ಪಂದ್ಯವನ್ನು ತನ್ನದಾಗಿಸಿಕೊಂಡಿತು.

 

ಬೌಲಿಂಗ್ ವಿಭಾಗದಲ್ಲೂ ಭಾರತ ಗಮನಾರ್ಹ ಪ್ರದರ್ಶನ ನೀಡಿತು. ಅನುಭವರಹಿತ ಬೌಲರ್‌ಗಳಿದ್ದರೂ ಜಿಂಬಾಬೈ ಬ್ಯಾಟರ್‌ಗಳಿಗೆ ರನ್ ಗಳಿಸಲು ಅವಕಾಶ ನೀಡಲಿಲ್ಲ. ತಂಡಕ್ಕೆ ಮರಳಿದ ವೇಗಿ ಮಾಯಾಂಕ್ ಯಾದವ್ ಮೊದಲ ಎಸೆತದಲ್ಲೇ ವಿಕೆಟ್ ಪಡೆದು ಅದ್ಭುತ ಆರಂಭ ನೀಡಿದರು. 18 ರನ್ ನೀಡಿ ಎರಡು ವಿಕೆಟ್ ಕಬಳಿಸಿದ ಅವರು ಪಂದ್ಯಶ್ರೇಷ್ಠ ಪ್ರಶಸ್ತಿಗೂ ಪಾತ್ರರಾದರು. ಪ್ರಿನ್ಸ್ ಯಾದವ್ ಕೂಡ ಪರಿಣಾಮಕಾರಿ ಬೌಲಿಂಗ್ ಪ್ರದರ್ಶಿಸಿದರು. ಚೊಚ್ಚಲ ಪಂದ್ಯವಾಡಿದ ಅಶೋಕ್ ಶರ್ಮ ವಿಕೆಟ್ ಪಡೆಯದಿದ್ದರೂ ತಮ್ಮ ಬೌಲಿಂಗ್‌ನಿಂದ ಗಮನ ಸೆಳೆದರು. ರವಿ ಬಿಷ್ಣೋಯಿ ಕೂಡ ಉತ್ತಮ ಬೆಂಬಲ ನೀಡಿದರು.

 

ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಅನುಪಸ್ಥಿತಿಯಲ್ಲಿ ತಂಡದ ಜವಾಬ್ದಾರಿ ನಿರ್ವಹಿಸುತ್ತಿರುವ ವಿವಿಎಸ್ ಲಕ್ಷ್ಮಣ್ ಅವರ ಮಾರ್ಗದರ್ಶನವೂ ಭಾರತದ ಯಶಸ್ಸಿಗೆ ನೆರವಾಗಿದೆ.

 

ಜಿಂಬಾಬೈ ಅಗ್ರ ಕ್ರಮಾಂಕದ ಮೇಲೆ ಒತ್ತಡ

ಮೊದಲ ಪಂದ್ಯದಲ್ಲಿ ಜಿಂಬಾಬೈಗೆ ಪವರ್‌ಪ್ಲೇ ಅವಧಿಯೇ ದೊಡ್ಡ ಹೊಡೆತವಾಗಿ ಪರಿಣಮಿಸಿತು. ಅಗ್ರ ಕ್ರಮಾಂಕದ ನಾಲ್ವರು ಬ್ಯಾಟರ್‌ಗಳು ಸೇರಿ ಕೇವಲ 20 ರನ್ ಗಳಿಸಿದ್ದರಿಂದ ತಂಡ ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿತು. ನಾಯಕ ಸಿಕಂದರ್ ರಝಾ ಸೇರಿದಂತೆ ಪ್ರಮುಖ ಬ್ಯಾಟರ್‌ಗಳು ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಎರಡನೇ ಪಂದ್ಯದಲ್ಲಿ ಬ್ರಿಯಾನ್ ಬೆನೆಟ್, ಬೆನ್ ಕರನ್ ಹಾಗೂ ಡಿಯಾನ್ ಮೈಯರ್ಸ್ ಉತ್ತಮ ಬ್ಯಾಟಿಂಗ್ ನಡೆಸಿದರೆ ಮಾತ್ರ ಜಿಂಬಾಬೈ ಭಾರತಕ್ಕೆ ಪೈಪೋಟಿ ನೀಡುವ ಸಾಧ್ಯತೆ ಇದೆ.