ದುಬೈ: ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಏಷ್ಯಾ ಕಪ್ 2025 ಪಂದ್ಯದಲ್ಲಿ ಪಾಕಿಸ್ತಾನವನ್ನು ಏಳು ವಿಕೆಟ್‌ಗಳಿಂದ ಸೋಲಿಸಿದ ಭಾರತ ಪಂದ್ಯ ಮುಕ್ತಾಯಗೊಂಡ ತಕ್ಷಣ ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಶಿವಂ ದುಬೆ ಪಾಕಿಸ್ತಾನ ಕ್ರಿಕೆಟಿಗರ ಕೈಕುಲುಕದೆ ಮೈದಾನದಿಂದ ಹೊರನಡೆದರು. ಹೀಗಿದ್ದರೂ ಪಂದ್ಯ ಬಳಿಕ ಭಾರತೀಯ ಆಟಗಾರರನ್ನು ಅಭಿನಂದಿಸಲು ಪಾಕ್ ಆಟಗಾರರು ಕಾದು ನಿಂತರು. ಆದರೆ ಡ್ರೆಸ್ಸಿಂಗ್ ರೂಂಗೆ ತೆರಳಿದ ಭಾರತೀಯರು ಬಾಗಿಲು ಬಂದ್ ಮಾಡಿ ಒಳಗೆ ಸೇರಿಕೊಂಡರು. ಇದೀಗಸಲ್ಮಾನ್ ಅಲಿ ಅಘಾ ನೇತೃತ್ವದ ಪಾಕಿಸ್ತಾನ ತಂಡ ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ಗೆ ದೂರು ನೀಡಿದೆ.
ಭಾರತೀಯ ಆಟಗಾರರು ಕೈಕುಲುಕದೇ ಇರುವ ವರ್ತನೆಯ ವಿರುದ್ಧ ತಂಡದ ವ್ಯವಸ್ಥಾಪಕ ನವೀದ್ ಚೀಮಾ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಕ್ರೀಡಾಸ್ಫೂರ್ತಿಗೆ ವಿರುದ್ಧ ಮತ್ತು ಆಟದ ಉತ್ಸಾಹಕ್ಕೆ ವಿರುದ್ಧವೆಂದು ಪರಿಗಣಿಸಲಾಗಿದೆ ಎಂದು ಪಿಸಿಬಿ ಹೇಳಿಕೆ ತಿಳಿಸಿದೆ. ಮಾತ್ರವಲ್ಲದೆ ಟಾಸ್ ಸಮಯದಲ್ಲಿ ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ ನಾಯಕ ಸಲ್ಮಾನ್ ಅಲಿ ಅಘಾ ಅವರನ್ನು ಭಾರತೀಯ ತಂಡದ ನಾಯಕನೊಂದಿಗೆ ಹಸ್ತಲಾಘವ ಮಾಡದಂತೆ ಕೇಳಿಕೊಂಡಿದ್ದರು ಎಂದು ಪಿಸಿಬಿ ಆರೋಪಿಸಿದೆ.
ಪಂದ್ಯ ಆರಂಭದ ಮೊದಲು ಟಾಸ್ ವೇಳೆ, ಎರಡೂ ತಂಡಗಳು ಕೈಕುಲುಕದೆ ಇದ್ದುದು ಕೂಡ ಗಮನ ಸೆಳೆಯಿತು.