ಬಾಲಿವುಡ್ ನಟಿ ಹಾಗೂ ಬಿಗ್ ಬಾಸ್ ಸೀಸನ್ 13 ರ ಸ್ಪರ್ಧಿಯಾಗಿದ್ದ 42 ವರ್ಷ ಪ್ರಾಯದ ಶೆಫಾಲಿ ಜರಿವಾಲ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. 2002ರ 'ಕಾಂಟಾ ಲಗಾ' ಎಂಬ ವಿಡಿಯೋ ಮೂಲಕ ಇವರು ಪ್ರಸಿದ್ಧಿಯಾಗಿದ್ದರು.
ಶುಕ್ರವಾರ ಮುಂಜಾನೆ ಎದೆನೋವು ಕಾಣಿಸಿಕೊಂಡಿದ್ದು ಕೂಡಲೇ ಪತಿ ಪರಾಗ್ ತ್ಯಾಗಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ದಾರಿ ಮಧ್ಯೆಯೇ ಅವರ ಪ್ರಾಣಪಕ್ಷಿ ಹಾರಿ ಹೋಗಿತ್ತು. ವೈದ್ಯರು ಪರಿಶೀಲನೆ ನಡೆಸಿ ಅವರು ಮೃತಪಟ್ಟ ಬಗ್ಗೆ ತಿಳಿಸಿದ್ದಾರೆ.
ಮುಂಬೈನ ಅಂಧೇರಿ ಲೋಖಂಡವಾಲ ಪ್ರದೇಶದಲ್ಲಿ ವಾಸಿಸುತ್ತಿದ್ದ ನಟಿ, ದೈವ ಭಕ್ತೆಯಾಗಿದ್ದು ಹಲವಾರು ದಾನ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಅವರು ಅನಾಥ ಮಕ್ಕಳಿಗೆ ದಾನ ನೀಡುವ ವಿಡಿಯೋ ಬಹಳಷ್ಟು ಜನರ ಮೆಚ್ಚುಗೆಗೆ ಪಾತ್ರವಾಗಿತ್ತು.
ಶೆಫಾಲಿ ಜರಿವಾಲ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆ ಕೂಡ 'ನಾ ಬೋರ್ಡು ಇರದ ಬಸ್ಸನ್ನು' ಎಂಬ ಹಾಡಿಗೆ ಹೆಜ್ಜೆ ಹಾಕಿದ್ದರು. ಇದೀಗ ನಟಿಯ ಅಕಾಲಿಕ ನಿಧನಕ್ಕೆ ಚಿತ್ರರಂಗ ಕಂಬನಿ ಮಿಡಿದಿದೆ.