ಮುಂಬೈ: ಬೆಳ್ಳಿತೆರೆಯ ಮೇಲೆ ಸಾಹಸದಿಂದ ಪ್ರಭಾವ ಬೀರುವ ಅಕ್ಷಯ್ ಕುಮಾರ್, ಇತ್ತೀಚೆಗೆ ನಿಜ ಜೀವನದಲ್ಲೂ ಸಹ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಸಿನಿಮಾ ಸೆಟ್‌ಗಳಲ್ಲಿ ಪ್ರಾಣಾಪಾಯದ ಕೆಲಸ ಮಾಡುತ್ತಿರುವ ಸ್ಟಂಟ್‌ಮ್ಯಾನ್‌ಗಳ ಭದ್ರತೆಗೆ ಅವರು ಮಾನವೀಯ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ — ದೇಶದಾದ್ಯಂತ ಸುಮಾರು 650 ಕ್ಕೂ ಹೆಚ್ಚು ಸ್ಟಂಟ್‌ಮ್ಯಾನ್‌ಗಳು ಮತ್ತು ಆಕ್ಷನ್ ಸಿಬ್ಬಂದಿಗೆ ಜೀವ ವಿಮೆ ಮಾಡಿಸಿರುವುದಾಗಿ ವರದಿಯಾಗಿದೆ.
ಇತ್ತೀಚೆಗೆ ತಮಿಳು ಚಲನಚಿತ್ರ ವೆಟ್ಟುವಂ ಸೆಟ್‌ನಲ್ಲಿ ಸ್ಟಂಟ್‌ಮ್ಯಾನ್ ಎಸ್‌ಎಂ ರಾಜು ದುರಂತವಾಗಿ ಮೃತಪಟ್ಟಿದ್ದರ ಪರಿಣಾಮ, ಅಕ್ಷಯ್ ಈ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಈ ದುರ್ಘಟನೆಯ ನಂತರ, ಸ್ಟಂಟ್ ಕಲಾವಿದರು ತಮ್ಮ ಸುರಕ್ಷತೆಗೆ ಮೌಲ್ಯ ನೀಡಬೇಕೆಂಬ ಚರ್ಚೆಗೆ ಇಳಿದಿದ್ದು, ಅಕ್ಷಯ್ ಕುಮಾರ್ ತನ್ನದೇ ಆದ ರೀತಿಯಲ್ಲಿ ಪರಿಹಾರ ನೀಡಿದ್ದಾರೆ.
ಈ ವಿಮೆ ಪ್ರಕಾರ, ಯಾವುದೇ ಸೆಟ್‌ನಲ್ಲಿ ಗಾಯವಾದರೂ ಅಥವಾ ಬೇರೆ ಯಾವುದೇ ಸಮಯದಲ್ಲಾದರೂ, ಸ್ಟಂಟ್‌ಮ್ಯಾನ್‌ಗಳು ₹5 ಲಕ್ಷದಿಂದ ₹5.5 ಲಕ್ಷವರೆಗೆ ಚಿಕಿತ್ಸಾ ಮೊತ್ತವನ್ನು ಪಡೆಯಲು ಅರ್ಹರಾಗಿರುತ್ತಾರೆ.
ಸ್ಟಂಟ್ ಕಲಾವಿದ ವಿಕ್ರಮ್ ಸಿಂಗ್ ದಹಿಯಾ, ಅಕ್ಷಯ್‌ಗೆ ಕೃತಜ್ಞತೆ ವ್ಯಕ್ತಪಡಿಸುತ್ತಾ, “ಗುಂಜನ್ ಸಕ್ಸೇನಾ, ಆಂಟಿಮ್, ಓಎಂಜಿ 2, ಜಿಗ್ರಾ ಹೀಗೆ ಅನೇಕ ಚಿತ್ರಗಳಲ್ಲಿ ನಾನು ಕೆಲಸ ಮಾಡಿದ್ದೇನೆ. ಆದರೆ ಅಕ್ಷಯ್ ಸರ್ ನಿಜವಾದ ನಾಯಕರು. ಇಂದು ನಮ್ಮ ರಕ್ಷಣೆಗಾಗಿ ಯಾರಾದರೂ ಮುಂದೆ ಬಂದಿದ್ದಾರೆ ಎಂಬ ಭರವಸೆ ನಮಗೆ ಮೂಡಿದೆ,” ಎಂದು ತಿಳಿಸಿದ್ದಾರೆ