31 July 2025 | Join group

ಆಗಸ್ಟ್ 29ಕ್ಕೆ ರಿಪ್ಪನ್ ಸ್ವಾಮಿ ತೆರೆಗೆ : ಅತಿ ಶೀಘ್ರದಲ್ಲಿಯೇ ಬರಲಿದೆ ಟೀಸರ್, ಟ್ರೇಲರ್..!

  • 28 Jul 2025 11:43:17 AM

ಆಗಸ್ಟ್ 29ಕ್ಕೆ 'ರಿಪ್ಪನ್ ಸ್ವಾಮಿ' ತೆರೆಗೆ ಬರುತ್ತಿದೆ. ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಅವರು ಇತ್ತೀಚೆೆಗೆ ಒಪ್ಪಿಕೊಂಡಿರುವ ಸಿನಿಮಾಗಳು ವಿಭಿನ್ನತೆ ಹೊಂದಿರುವಂತಿವೆ. ಒಂದೊಂದು ಪಾತ್ರಗಳು ಹೊಸತಾದ ಮೆರಗು ತರುತ್ತಿವೆ. ಅಂತಹದೇ ಮತ್ತೊಂದು ಚಿತ್ರ ರಿಪ್ಪನ್ ಸ್ವಾಮಿ.

 

ಈ ಹಿಂದೆ ಮಾಲ್ಗುಡಿ ಡೇಸ್ ನಿರ್ದೇಶಿಸಿದ್ದ ಯುವ ನಿರ್ದೇಶಕ ಕಿಶೋರ್ ಮೂಡಬಿದ್ರೆ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಬಹುನಿರೀಕ್ಷಿತ ಈ ಸಿನಿಮಾದ ಟೀಸರ್ ಹಾಗೂ ಟ್ರೇಲರ್‌ಗಳನ್ನು ಅತಿ ಶೀಘ್ರದಲ್ಲೇ ಬಿಡುಗಡೆ ಮಾಡಲಾಗುತ್ತದೆ. ಆಗಸ್ಟ್ 29ರಂದು ರಾಜ್ಯಾದ್ಯಂತ ಚಿತ್ರ ಬಿಡುಗಡೆಗೊಳ್ಳಲಿದೆ. ಚಿತ್ರದ ಹಾಡುಗಳು ಕೂಡ ವಿಶೇಷವಾಗಿದ್ದು, ಒಟ್ಟು 2 ಹಾಡುಗಳಿವೆ.

 

ವಿಜಯ್ ರಾಘವೇಂದ್ರ ಅವರ ಸಿನಿ ಜೀವನದಲ್ಲಿಯೇ ಈ ಚಿತ್ರ ಅತ್ಯುತ್ತಮವೆಂದು ಹೇಳಿದರೆ ತಪ್ಪಾಗದು. ಅವರ ಪಾತ್ರ ಹಾಗೂ ಕಥಾನಕ ಗಟ್ಟಿ ಅಂಶಗಳನ್ನು ಹೊಂದಿದ್ದು, ಅವರಿಗೆ ಬೇಕಾದಷ್ಟು ನಟನಾ ಅವಕಾಶವಿದೆ. ಸಿನಿಮಾದ ಮೊದಲ ಪೋಸ್ಟರ್ ಬಿಡುಗಡೆಯಾದಾಗಿನಿಂದಲೇ ಪ್ರೇಕ್ಷಕರ ಗಮನ ಸೆಳೆಯಲು ಯಶಸ್ವಿಯಾಗಿದೆ. ಚಿನ್ನಾರಿ ಮುತ್ತನನ್ನು ರಿಪ್ಪನ್ ಸ್ವಾಮಿಯಲ್ಲಿ ನೋಡುವತ್ತ ಫ್ಯಾನ್ಸ್‌ಗಳು ಕಾತುರದಿಂದ ಕಾಯುತ್ತಿದ್ದಾರೆ. ಆ ನಿರೀಕ್ಷೆಗೆ ಇನ್ನು ಕೆಲವೇ ದಿನಗಳು ಬಾಕಿ. ಆಗಸ್ಟ್ 29ಕ್ಕೆ ರಿಪ್ಪನ್ ಸ್ವಾಮಿ ನಿಮ್ಮ ಮುಂದೆ ತೆರೆ ಮೇಲೆ ಇರುತ್ತದೆ.

 

ಈ ಚಿತ್ರದಲ್ಲಿ ವಿಜಯ್ ರಾಘವೇಂದ್ರ ಅವರು ವಿಭಿನ್ನ ರಾ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದು, ಅವರ ಜೊತೆಗೆ ನಾಯಕಿಯಾಗಿ ಶಿವಮೊಗ್ಗ ಮೂಲದ ಕನ್ನಡ, ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ನಟಿಸಿರುವ ಅಶ್ವಿನಿ ಚಂದ್ರಶೇಖರ್ ಅಭಿನಯಿಸಿದ್ದಾರೆ. ಜೊತೆಗೆ ಪ್ರಕಾಶ್ ತುಮ್ಮಿ ನಾಡು, ವಜ್ರದೀರ್ ಜೈನ್, ಯಮುನಾ ಶ್ರೀನಿಧಿ, ಮೋಹನ್ ಶೇಣಿ, ಕೃಷ್ಣಮೂರ್ತಿ ಕವತ್ತಾರ್, ಪ್ರಭಾಕರ್ ಕುಂದಾರ್, ರಂಜನ್ ಶೆಟ್ಟಿ, ಸಂತೋಷ್ ಶೆಟ್ಟಿ ಮುಂತಾದ ಕಲಾವಿದರು ಚಿತ್ರದಲ್ಲಿ ಭಾಗವಹಿಸಿದ್ದಾರೆ.

 

ಪಂಚಾನನ ಫಿಲಂಸ್ ಬ್ಯಾನರ್ ಅಡಿಯಲ್ಲಿ ಸಮಾನ ಮನಸ್ಕರು ಕೈಜೋಡಿಸಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಇದು ಪಂಚಾನನ ಫಿಲಂಸ್‌ನ ಮೊದಲ ಸಿನಿಮಾ ಎಂಬುದೂ ವಿಶೇಷ. ಕೊಪ್ಪ, ಕಳಸ, ಬಾಳೆಹೊನ್ನೂರು ಸುತ್ತಮುತ್ತ ಚಿತ್ರೀಕರಣ ನಡೆಯಿದ್ದು, ಪ್ರಕೃತಿಯ ನೈಸರ್ಗಿಕತೆಗೂ ಚಿತ್ರದಲ್ಲಿ ಎಡೆ ನೀಡಲಾಗಿದೆ. ಚಿತ್ರಕ್ಕೆ ಮಲಯಾಳಂನ ಖ್ಯಾತ ಸಂಗೀತ ನಿರ್ದೇಶಕ ಸ್ಯಾಮ್ಯುವೆಲ್ ಅಭಿ ಅವರು ಸಂಗೀತ ನೀಡಿದ್ದು, ರಂಗನಾಥ್ ಸಿ ಎಂ ಕ್ಯಾಮೆರಾ ಸಂಭಾಲಿಸಿದ್ದಾರೆ. ಸಂಕಲನವನ್ನು ಶಶಾಂಕ್ ನಾರಾಯಣ್ ಮಾಡಿದ್ದಾರೆ. ಆಗಸ್ಟ್ 29ಕ್ಕೆ ರಿಪ್ಪನ್ ಸ್ವಾಮಿ ಚಿತ್ರ ರಿಲೀಸ್ ಆಗುತ್ತಿದೆ.