ಡಾ. ರಾಜ್ ಕುಮಾರ್ ನಂತರ ಕರ್ನಾಟಕ ಕನ್ನಡ ಚಿತ್ರರಂಗ ಕಂಡ ಮಹಾನಟರ ಪೈಕಿ ಸಾಹಸಸಿಂಹ ವಿಷ್ಣುವರ್ಧನ್ ಅವರೂ ಪ್ರಮುಖರು. ಇದೀಗ ರಾಜ್ಯ ಸರ್ಕಾರವು ಅವರಿಗೆ ಮರಣೋತ್ತರವಾಗಿ 'ಕರ್ನಾಟಕ ರತ್ನ' ಪ್ರಶಸ್ತಿಯನ್ನು ಘೋಷಿಸಿದ್ದು, ಇದು ಅವರ ಅಭಿಮಾನಿಗಳಿಗೆ ಅತೀವ ಸಂತೋಷವನ್ನು ತಂದಿದೆ.
ಸೆಪ್ಟೆಂಬರ್ 18ರಂದು ವಿಷ್ಣುವರ್ಧನ್ ರವರ 75ನೇ ಜಯಂತಿ ಆಚರಿಸಲಾಗುತ್ತಿದೆ. ಇದೇ ಸಂದರ್ಭದಲ್ಲಿಯೇ ಈ ಘೋಷಣೆ ಬಂದಿರುವುದು, ಅಭಿಮಾನಿಗಳ ನಡುವೆ ಹೆಚ್ಚಿನ ಉಲ್ಲಾಸ ಹುಟ್ಟಿಸಿದೆ. 1972 ರಲ್ಲಿ 'ವಂಶವೃಕ್ಷ' ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ವಿಷ್ಣುವರ್ಧನ್ ಅವರು ನಂತರ ‘ನಾಗರಹಾವು’, ‘ಬಂಧನ’, ‘ಭೂತಯ್ಯನ ಮಗ’, ‘ಗಂಧದ ಗುಡಿ’ ಸೇರಿದಂತೆ ಸುಮಾರು 200ಕ್ಕೂ ಹೆಚ್ಚು ಚಿತ್ರಗಳಲ್ಲಿ ತನ್ನ ವೈವಿಧ್ಯಮಯ ಅಭಿನಯದಿಂದ ಕನ್ನಡ ಚಲನಚಿತ್ರರಂಗದಲ್ಲಿ ಅಸಾಧಾರಣ ಹೆಸರು ಗಳಿಸಿದರು.
ಅವರು 2009 ರಲ್ಲಿ ನಿಧನರಾದರೂ, ಅವರ ಸ್ಮರಣೆಗಳು, ಚಿತ್ರಸೃಷ್ಠಿಯು ಇನ್ನೂ ಜೀವಂತವಾಗಿವೆ. ಆದರೆ ಅವರ ಸಮಾಧಿ ವಿಚಾರದಲ್ಲಿ ಇನ್ನೂ ಸ್ಪಷ್ಟತೆ ಇಲ್ಲ. ಅಂತ್ಯಕ್ರಿಯೆ ನೆರವೇರಿಸಿದ ಸ್ಥಳದಲ್ಲೇ ಸಮಾಧಿ ನಿರ್ಮಿಸಬೇಕೋ, ಅಥವಾ ಮೈಸೂರಿನಲ್ಲಿ ಮಾಡಬೇಕೋ ಎಂಬುದರ ಬಗ್ಗೆ ಗೊಂದಲ ಮುಂದುವರಿದಿದೆ. ರಾಜ್ಯ ಸಂಪುಟ ಈ ಕುರಿತು ನಿರ್ಧಾರ ಕೈಗೊಂಡು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ವಿಷಯವನ್ನು ಶ್ರೀಮತಿ ಭಾರತಿ ವಿಷ್ಣುವರ್ಧನ್ ಅವರಿಗೆ ತಿಳಿಸಿದರೆಂದು ತಿಳಿದುಬಂದಿದೆ. ವಿಷ್ಣುವರ್ಧನ್ ಅವರ ಜೊತೆಗೆ, ಇನ್ನೊಂದು ದಿಗ್ಗಜ ನಟಿ ಬಿ. ಸರೋಜಾ ದೇವಿಯವರಿಗೂ ಕೂಡ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ಈ ನಡುವೆ, ರಾಜ್ಯ ಸರ್ಕಾರ ರಾಷ್ಟ್ರಕವಿ ಕುವೆಂಪು ಅವರಿಗೆ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿಯನ್ನು ನೀಡಬೇಕೆಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ನಿರ್ಧರಿಸಿದೆ. ಇದರ ಕುರಿತಂತೆ ಸಚಿವ ಸಂಪುಟದಲ್ಲಿ ತೀರ್ಮಾನವಾಗಿರುವುದು ವಿಶೇಷ.
ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ ಈ ವಿಚಾರವಾಗಿ ತಮ್ಮ ಸಂತೋಷವನ್ನು ಹೀಗೆ ವ್ಯಕ್ತಪಡಿಸಿದರು:
"ಶ್ರೇಷ್ಠ ಕಲಾವಿದರಿಗೆ ಸರಕಾರದಿಂದ ಈ ರೀತಿಯ ಗೌರವ ಸಿಗಬೇಕು ಎಂಬುದು ನಮ್ಮ ಅಶಯವಾಗಿತ್ತು. ಇಂದು ಅದು ನನಸಾಗಿದೆ. ಈ ಗೌರವವನ್ನು ಪದಗಳಲ್ಲಿ ವರ್ಣಿಸಲಾಗದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ, ನಮ್ಮ ಸರ್ಕಾರಕ್ಕೆ, ಚಿತ್ರೋದ್ಯಮಕ್ಕೂ, ಅವರ ಅಭಿಮಾನಿಗಳಿಗೆ ನನ್ನ ಹಾಗೂ ನಮ್ಮ ಕುಟುಂಬದ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು ಸಲ್ಲಿಸುತ್ತೇನೆ."
ಹಿರಿಯ ನಟಿ ಶ್ರುತಿ ಕೂಡ ತಮ್ಮ ಸಂತಸ ಹೀಗೆ ಹಂಚಿಕೊಂಡರು:
"ಇಡೀ ಚಿತ್ರರಂಗದ ಪರವಾಗಿ, ಅಭಿಮಾನಿಗಳ ಪರವಾಗಿ ನಾವು ಈ ಮನವಿಯನ್ನು ಕೇಳಿದ್ದೆವು. ಸರಕಾರ ಅದನ್ನು ಗಮನಿಸಿ ಈ ಬಹುಮಾನ ಘೋಷಿಸಿರುವುದು ನಮಗೆ ಹೆಮ್ಮೆ ತಂದಿದೆ. ಮುಖ್ಯಮಂತ್ರಿಯವರು, ಉಪಮುಖ್ಯಮಂತ್ರಿಯವರು ಹಾಗೂ ಸಂಪುಟದ ಎಲ್ಲರಿಗೆ ಕೋಟಿ ಕೋಟಿ ಧನ್ಯವಾದಗಳು."
ಒಬ್ಬ ಶಿಸ್ತುಬದ್ಧ, ಸಂವೇದನಾಶೀಲ ಹಾಗೂ ಸಾಧನೆಯೊಳಗಿನ ಕಲಾವಿದನಿಗೆ ಈ ರೀತಿಯ ರಾಜ್ಯಮಟ್ಟದ ಗೌರವ ಸಿಕ್ಕಿರುವುದು ಕನ್ನಡ ಚಿತ್ರರಂಗ ಮತ್ತು ಅಭಿಮಾನಿಗಳಲ್ಲಿ ಸಂತಸ ತಂದಿದೆ.