'ಸು ಫ್ರಮ್ ಸೋ' ಸ್ಟೈಲ್‌ನಲ್ಲೇ ಹಸೆಮಣೆ ಏರಿದ ಜೆಪಿ ತುಮ್ಮಿನಾಡು!

  • 06 May 2026 06:09:21 PM

ಮಂಗಳೂರು: 2025ರ ಬ್ಲಾಕ್ ಬಸ್ಟರ್ ಸಿನಿಮಾ 'ಸು ಫ್ರಮ್ ಸೋ' ಮೂಲಕ ಇಡೀ ಕರುನಾಡಿಗೆ ನಗುವಿನ ಕಚಗುಳಿ ಇಟ್ಟಿದ್ದ ನಟ-ನಿರ್ದೇಶಕ ಜೆಪಿ ತುಮ್ಮಿನಾಡು (ಜಯ ಪ್ರಕಾಶ್) ಇಂದು ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ದೀರ್ಘಕಾಲದ ಗೆಳತಿ ರಶ್ಮಿಕಾ ಅವರ ಕೈಹಿಡಿಯುವ ಮೂಲಕ ತಮ್ಮ ಜೀವನದ 'ರಿಯಲ್' ಸ್ಟೋರಿಯನ್ನು ಶುಭಾಂತ್ಯಗೊಳಿಸಿದ್ದಾರೆ.

 

ಸಿನಿಮಾದಲ್ಲಿ ಮದುವೆ ಸಮಾರಂಭದ ನಂತರ ಶುರುವಾಗುವ 'ಸುಲೋಚನಾ' ಕಾಟ ಪ್ರೇಕ್ಷಕರನ್ನು ರಂಜಿಸಿತ್ತು. ಆದರೆ ಇಲ್ಲಿ ಯಾವುದೇ ಸದ್ದಿಲ್ಲದೆ, ಮಂಗಳೂರಿನ ಪಿಲಿಕುಳದ ಸ್ಕೌಟ್ ಭವನದಲ್ಲಿ ಬುಧವಾರ ಬೆಳಿಗ್ಗೆ ಸಾಂಪ್ರದಾಯಿಕ ಶೈಲಿಯಲ್ಲಿ ಅತ್ಯಂತ ಸಂಭ್ರಮದಿಂದ ಈ ವಿವಾಹ ಮಹೋತ್ಸವ ಜರುಗಿದೆ.

 

'ಲೈಟರ್ ಬುದ್ಧ' ಫಿಲ್ಮ್ಸ್‌ನ ರಾಜ್ ಬಿ ಶೆಟ್ಟಿ, ತುಳು ಚಿತ್ರರಂಗದ ಸ್ಟಾರ್‌ಗಳಾದ ರೂಪೇಶ್ ಶೆಟ್ಟಿ, ಅರ್ಜುನ್ ಕಾಪಿಕಾಡ್, ದೇವದಾಸ್ ಕಾಪಿಕಾಡ್ ಮತ್ತು ನಟ ಪ್ರಕಾಶ್ ತುಮ್ಮಿನಾಡು ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿ ನವಜೋಡಿಗೆ ಶುಭ ಹಾರೈಸಿದರು.

 

ಜೆಪಿ ತುಮ್ಮಿನಾಡು ಅವರು ತಮ್ಮ ಇನ್‌ಸ್ಟಾಗ್ರಾಮ್ ಪುಟದಲ್ಲಿ ಮದುವೆಯ ಸುಂದರ ಕ್ಷಣಗಳನ್ನು ಹಂಚಿಕೊಂಡಿದ್ದು, "ಹೊಸ ಅಧ್ಯಾಯ ಆರಂಭ" ಎಂದು ಬರೆದುಕೊಂಡಿದ್ದಾರೆ.

 

ಕರಾವಳಿಯ ರಂಗಭೂಮಿಯಲ್ಲಿ 14 ವರ್ಷಗಳ ಕಾಲ ಪೇಂಟರ್ ಆಗಿ, ಕಲಾವಿದನಾಗಿ ದುಡಿದು ಬಂದ ಜೆಪಿ, ಇಂದು ಕನ್ನಡ ಚಿತ್ರರಂಗದ ಭರವಸೆಯ ಪ್ರತಿಭೆಯಾಗಿ ಬೆಳೆದಿದ್ದಾರೆ. 'ಒಂದು ಮೊಟ್ಟೆಯ ಕಥೆ', 'ಗರುಡ ಗಮನ ವೃಷಭ ವಾಹನ' ದಂತಹ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದ ಅವರು, 'ಸು ಫ್ರಮ್ ಸೋ' ಮೂಲಕ 100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದಿದ್ದರು.

 

ಕರಾವಳಿಯ ಈ ಪ್ರತಿಭಾವಂತ ಕಲಾವಿದನಿಗೆ ನಮ್ಮ *ಸುಧಾವಾಣಿ* ಕಡೆಯಿಂದ ಸುಖಿ ದಾಂಪತ್ಯ ಜೀವನದ ಶುಭಾಶಯಗಳು.