ಹೈದರಾಬಾದ್: ಪ್ರತಿ ಸಿನಿಮಾದ ಯಶಸ್ಸನ್ನು ಕೇವಲ ಬಾಕ್ಸ್ ಆಫೀಸ್ ಕಲೆಕ್ಷನ್‌ನಿಂದಲೇ ಅಳೆಯಲು ಸಾಧ್ಯವಿಲ್ಲ. ಕೆಲವು ಚಿತ್ರಗಳು ಥಿಯೇಟರ್‌ನಲ್ಲಿ ನಿರೀಕ್ಷಿತ ಯಶಸ್ಸು ಕಾಣದಿದ್ದರೂ, ನಂತರ ಡಿಜಿಟಲ್ ವೇದಿಕೆಗಳಲ್ಲಿ ಅಪಾರ ಜನಪ್ರಿಯತೆ ಗಳಿಸಿ ಹೊಸ ಇತಿಹಾಸ ನಿರ್ಮಿಸುತ್ತವೆ.
ಅಂತಹ ಸಿನಿಮಾಗಳಲ್ಲಿ ನಿರ್ದೇಶಕ ಬೋಯಪಾಟಿ ಶ್ರೀನು ಅವರ ‘ಜಯ ಜಾನಕಿ ನಾಯಕ’ ಕೂಡ ಒಂದು.
2017ರಲ್ಲಿ ಬಿಡುಗಡೆಯಾದ ಈ ರೊಮ್ಯಾಂಟಿಕ್ ಆಕ್ಷನ್ ಚಿತ್ರದಲ್ಲಿ ಬೆಳ್ಳಂಕೊಂಡ ಸಾಯಿ ಶ್ರೀನಿವಾಸ್ ಹಾಗೂ ರಕುಲ್ ಪ್ರೀತ್ ಸಿಂಗ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಸುಮಾರು ₹40 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಕೇವಲ ₹20 ಕೋಟಿ ಗಳಿಕೆ ಮಾಡಿ ವಾಣಿಜ್ಯವಾಗಿ ನಿರಾಸೆ ಮೂಡಿಸಿತು. ಚಿತ್ರದ ಪ್ರದರ್ಶನ ನಿರ್ದೇಶಕ, ನಿರ್ಮಾಪಕರು ಹಾಗೂ ಚಿತ್ರತಂಡಕ್ಕೆ ದೊಡ್ಡ ಆಘಾತವಾಗಿತ್ತು.
ಆದರೆ, ಚಿತ್ರದ ನಿಜವಾದ ಯಶೋಗಾಥೆ ನಂತರ ಆರಂಭವಾಯಿತು. ಪೆನ್ ಮೂವೀಸ್ ಯೂಟ್ಯೂಬ್ ಚಾನೆಲ್ ಈ ಚಿತ್ರವನ್ನು ಹಿಂದಿಗೆ ಡಬ್ ಮಾಡಿ ಬಿಡುಗಡೆ ಮಾಡಿತು. ಅಲ್ಲಿ ಚಿತ್ರಕ್ಕೆ ವಿಶ್ವದಾದ್ಯಂತದ ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ದೊರೆಯಿತು. ಪರಿಣಾಮ, ಚಿತ್ರದ ಹಿಂದಿ ಆವೃತ್ತಿ 100 ಕೋಟಿ (1 ಬಿಲಿಯನ್) ವೀಕ್ಷಣೆಗಳನ್ನು ದಾಟಿ ಹೊಸ ದಾಖಲೆ ನಿರ್ಮಿಸಿತು.
ಈ ಐತಿಹಾಸಿಕ ಸಾಧನೆಯ ಹಿನ್ನೆಲೆಯಲ್ಲಿ ನಿರ್ದೇಶಕ ಬೋಯಪಾಟಿ ಶ್ರೀನು ಸಾಮಾಜಿಕ ಜಾಲತಾಣದಲ್ಲಿ ಸಂತಸ ವ್ಯಕ್ತಪಡಿಸಿದರು. “1 Billion Views… 100 ಕೋಟಿ ಭಾವನೆಗಳು… One and Only Cinema” ಎಂದು ಬರೆದು, ಈ ಅಪರೂಪದ ಸಾಧನೆಯ ಸಂಪೂರ್ಣ ಶ್ರೇಯಸ್ಸು ಪ್ರೇಕ್ಷಕರಿಗೆ ಸಲ್ಲುತ್ತದೆ ಎಂದು ಕೃತಜ್ಞತೆ ಸಲ್ಲಿಸಿದರು.
ಒಮ್ಮೆ ಥಿಯೇಟರ್‌ನಲ್ಲಿ ಸೋತಿದ್ದ ಈ ಸಿನಿಮಾ, ಇಂದು ಯೂಟ್ಯೂಬ್‌ನಲ್ಲಿ ಇತಿಹಾಸ ನಿರ್ಮಿಸಿರುವುದು ಡಿಜಿಟಲ್ ವೇದಿಕೆಗಳು ಒಂದು ಚಿತ್ರದ ಭವಿಷ್ಯವನ್ನೇ ಹೇಗೆ ಬದಲಾಯಿಸಬಲ್ಲವು ಎಂಬುದಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ.





