ಮಂಗಳೂರು: ಹಾಸ್ಯ ಮತ್ತು ಮನರಂಜನೆಯ ಮೂಲಕ ಪ್ರೇಕ್ಷಕರ ಮೆಚ್ಚುಗೆ ಪಡೆದಿರುವ ತುಳು ಸಿನಿಮಾ '90 ಎಂಎಲ್' ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ 50 ದಿನಗಳನ್ನು ಪೂರೈಸಿದೆ. ಡಿಡಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಡಾಲ್ಫಿ ಡಿಸೋಜಾ ನಿರ್ಮಿಸಿರುವ ಈ ಚಿತ್ರಕ್ಕೆ ರಂಜಿತ್ ಸಿ. ಬಜಾಲ್ ಕಥೆ, ಚಿತ್ರಕಥೆ ಹಾಗೂ ನಿರ್ದೇಶನ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಸುಂದರ ತಾಣಗಳಲ್ಲಿ ಚಿತ್ರದ ಚಿತ್ರೀಕರಣ ನಡೆದಿರುವುದು ವಿಶೇಷ.
ಚಿತ್ರದಲ್ಲಿ ವಿನೀತ್ ಕುಮಾರ್, ರುಹಾನಿ ಶೆಟ್ಟಿ, ನವೀನ್ ಡಿ. ಪಡೀಲ್, ಅರವಿಂದ್ ಬೋಳಾರ್, ರೋಷನ್ ಶೆಟ್ಟಿ, ಉಮೇಶ್ ಮಿಜಾರ್, ದೀಪಕ್ ರೈ ಪಣಾಜೆ, ಪುಷ್ಪರಾಜ್ ಬೊಳ್ಳಾರ್, ನಮಿತಾ, ಶೈಲಶ್ರೀ ಹಾಗೂ ಧೃತಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ತುಳಸಿದಾಸ್ ಮಂಗೇಶ್ವರ್ ಸಂಭಾಷಣೆ ಬರೆದಿದ್ದು, ಅರ್ಜುನ್ ಎಂ.ವಿ. ಛಾಯಾಗ್ರಹಣ, ಸೃಜನ್ ಕುಮಾರ್ ತೋನ್ಸೆ ಸಂಗೀತ, ಸಚಿನ್ ರಾಮ್ ಸಂಕಲನ ಹಾಗೂ ಆಚಾರ್ಯ ಗುರು ವಿನ್ಯಾಸ ನಿರ್ವಹಿಸಿದ್ದಾರೆ.
ಮಂಗಳೂರು, ಉಡುಪಿ, ಪುತ್ತೂರು, ಬೆಳ್ತಂಗಡಿ, ಪಡುಬಿದ್ರಿ, ಸುರತ್ಕಲ್, ಕಾರ್ಕಳ, ದೇರಳಕಟ್ಟೆ ಸೇರಿದಂತೆ ಕರಾವಳಿಯ ಹಲವು ಕೇಂದ್ರಗಳಲ್ಲಿ ಬಿಡುಗಡೆಯಾಗಿರುವ ಈ ಚಿತ್ರ, ಉತ್ತಮ ಪ್ರೇಕ್ಷಕರ ಬೆಂಬಲದೊಂದಿಗೆ ಯಶಸ್ವಿ ಪ್ರದರ್ಶನ ಮುಂದುವರಿಸಿದೆ.





