06 August 2026 |

ತುಳು-ಕನ್ನಡದಲ್ಲಿ ಏಕಕಾಲದ ಬಿಡುಗಡೆಗೆ ಸಜ್ಜಾದ ‘ಪಿಚ್ಚರ್’; ಆ. 7ರಂದು ರಾಜ್ಯಾದ್ಯಂತ ಪ್ರದರ್ಶನ

  • 05 Aug 2026 03:14:14 PM

ಮಂಗಳೂರು: ಶಿಲ್ಪಾ ಗಣೇಶ್ ನಿರ್ಮಾಣದಲ್ಲಿ, ಗೋಲ್ಡನ್ ಸ್ಟಾರ್ ಗಣೇಶ್ ಅವರ ಗೋಲ್ಡನ್ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಮೂಡಿಬಂದಿರುವ ತುಳು-ಕನ್ನಡ ದ್ವಿಭಾಷಾ ಚಲನಚಿತ್ರ ‘ಪಿಚ್ಚರ್’ ಆಗಸ್ಟ್ 7ರಂದು ತುಳುನಾಡು ಸೇರಿದಂತೆ ರಾಜ್ಯದ ವಿವಿಧ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

 

ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗೋಲ್ಡನ್ ಸ್ಟಾರ್ ಗಣೇಶ್, ತುಳು ಭಾಷೆಯ ಮೇಲಿನ ಅಭಿಮಾನದಿಂದ ಈ ಚಿತ್ರವನ್ನು ನಿರ್ಮಿಸಲು ಕೈಹಾಕಿದ್ದು, ತಮ್ಮಿಂದಾಗುವ ಸೇವೆಯನ್ನು ಸಲ್ಲಿಸಿರುವ ಸಂತೋಷವಿದೆ ಎಂದು ಹೇಳಿದರು. ಚಿತ್ರದಲ್ಲಿ ಅನುಭವಿ ಹಿರಿಯ ಕಲಾವಿದರ ಜೊತೆಗೆ ಹೊಸ ಪ್ರತಿಭೆಗಳಿಗೂ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.

 

ಈಗಾಗಲೇ ಪುತ್ತೂರು ಮತ್ತು ಉಡುಪಿಯಲ್ಲಿ ನಡೆದ ಪ್ರೀಮಿಯರ್ ಪ್ರದರ್ಶನಗಳಿಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿಬಂದಿವೆ ಎಂದರು.

 

ಚಿತ್ರದಲ್ಲಿ ಹಾಸ್ಯ, ಕುಟುಂಬ ಬಾಂಧವ್ಯ ಹಾಗೂ ಭಾವನಾತ್ಮಕ ಅಂಶಗಳಿಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಎಲ್ಲರೂ ಒಟ್ಟಾಗಿ ಕುಳಿತು ವೀಕ್ಷಿಸಬಹುದಾದ ಮನರಂಜನಾ ಚಿತ್ರವಾಗಿದೆ ಎಂದು ಗಣೇಶ್ ಹೇಳಿದರು. ವಿಶೇಷ ಆಕರ್ಷಣೆಯಾಗಿ ಚಿತ್ರದ ಒಂದು ಹಾಡನ್ನು ಕಾಶ್ಮೀರದ ಸುಂದರ ತಾಣಗಳಲ್ಲಿ ಚಿತ್ರೀಕರಿಸಲಾಗಿದೆ. ನಿರ್ಮಾಪಕಿ ಶಿಲ್ಪಾ ಗಣೇಶ್ ಇದೇ ಚಿತ್ರದ ಮೂಲಕ ಗಾಯಕಿಯಾಗಿಯೂ ಪರಿಚಯವಾಗಿರುವುದು ಮತ್ತೊಂದು ವಿಶೇಷ ಎಂದರು.

 

ತುಳು ಸಿನಿಮಾ ಹಾಗೂ ರಂಗಭೂಮಿಯ ಹಲವು ಖ್ಯಾತ ಕಲಾವಿದರು ಒಂದೇ ಚಿತ್ರದಲ್ಲಿ ಕಾಣಿಸಿಕೊಂಡಿರುವುದು ಸಂತೋಷದ ವಿಷಯವಾಗಿದೆ. ತಮ್ಮ ಮೊದಲ ಚಿತ್ರ ‘ಚೆಲ್ಲಾಟ’ದ ನಿರ್ದೇಶಕರೂ ಕರಾವಳಿ ಭಾಗದವರಾಗಿದ್ದರು. ಉತ್ತಮ ಕಥೆ ದೊರೆತರೆ ಮುಂದೆಯೂ ತುಳು ಸಿನಿಮಾಗಳಲ್ಲಿ ಅಭಿನಯಿಸಲು ಸಿದ್ಧನಿದ್ದೇನೆ ಎಂಬ ವಿಶ್ವಾಸವನ್ನು ಗಣೇಶ್ ವ್ಯಕ್ತಪಡಿಸಿದರು.

 

ನಿರ್ಮಾಪಕಿ ಶಿಲ್ಪಾ ಗಣೇಶ್ ಮಾತನಾಡಿ, ಸುಮಾರು ಒಂದೂವರೆ ವರ್ಷದ ಹಿಂದೆ ಈ ಚಿತ್ರದ ನಿರ್ಮಾಣಕ್ಕೆ ಚಾಲನೆ ನೀಡಿದ್ದೆವು. ತುಳುನಾಡಿನ ಜನರ ಪ್ರೀತಿ ಮತ್ತು ಭಾವನಾತ್ಮಕ ಬಂಧ ಈ ಚಿತ್ರದ ಕೆಲಸಕ್ಕೆ ಪ್ರೇರಣೆಯಾಯಿತು. ಸಣ್ಣ ಮಟ್ಟದಲ್ಲಿ ಆರಂಭವಾದ ಯೋಜನೆ ನಂತರ ದೊಡ್ಡ ಬಜೆಟ್‌ನ ಚಿತ್ರವಾಗಿ ರೂಪುಗೊಂಡಿತು. ಚಿತ್ರದ ಪ್ರತಿಯೊಂದು ಹಂತದಲ್ಲೂ ಗಣೇಶ್ ಅವರ ಸಂಪೂರ್ಣ ಬೆಂಬಲ ದೊರೆತಿದೆ ಎಂದು ಹೇಳಿದರು.

 

ಪತ್ರಿಕಾಗೋಷ್ಠಿಯಲ್ಲಿ ನಾಯಕ ನಟ ನಿತ್ಯಪ್ರಕಾಶ್ ಬಂಟ್ವಾಳ್, ನಾಯಕಿ ಅಮೃತಾ, ಹಿರಿಯ ಕಲಾವಿದರಾದ ದೇವದಾಸ್ ಕಾಪಿಕಾಡ್, ಭೋಜರಾಜ್ ವಾಮಂಜೂರು, ನಟ ಅರ್ಜುನ್ ದೇವ್, ನಿರ್ದೇಶಕ ಸಂದೀಪ್, ಸಂಗೀತ ನಿರ್ದೇಶಕ ಸಾಮ್ಯುವೆಲ್, ವಿತರಕರಾದ ಸಚಿನ್, ಮುನೀಂದ್ರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಅನುರಾಗ್ ನಿರೂಪಿಸಿದರು.

 

ತಾರಾಬಳಗದಲ್ಲಿ ಹಿರಿಯ ಕಲಾವಿದರ ಸಮಾಗಮ

‘ಪಿಚ್ಚರ್’ ಚಿತ್ರದಲ್ಲಿ ತುಳುನಾಡಿನ ಜನಪ್ರಿಯ ಕಲಾವಿದರಾದ ದೇವದಾಸ್ ಕಾಪಿಕಾಡ್, ನವೀನ್ ಡಿ. ಪಡೀಲ್, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರು, ಸಾಯಿಕೃಷ್ಣ, ಪ್ರಸನ್ನ ಶೆಟ್ಟಿ ಬೈಲೂರ್, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಉಮೇಶ್ ಮಿಜಾರ್, ರೂಪಾ ವರ್ಕಾಡಿ, ಪುಷ್ಪರಾಜ್ ಬೋಳಾರ್ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ. ಚಿತ್ರದ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಸಂದೀಪ್ ಬೆದ್ರ ರಚಿಸಿದ್ದು, ಸಂತೋಷ್ ರೈ ಪಾತಾಜೆ ಮತ್ತು ಚಂದ್ರಶೇಖರ್ ಕೆ.ಎಸ್. ಛಾಯಾಗ್ರಹಣದ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ.