ಜಗತ್ತಿನಲ್ಲಿ ಒಂದು ದೇಶವಿದೆ, ಅಲ್ಲಿ ರಾತ್ರಿ 10 ಗಂಟೆಯ ನಂತರ ನೀವು ಟಾಯ್ಲೆಟ್ ಫ್ಲಶ್ ಮಾಡಿದರೆ ನಿಮ್ಮ ನೆರೆಹೊರೆಯವರು ನಿಮ್ಮನ್ನು ವಿಚಿತ್ರವಾಗಿ ನೋಡಲು ಶುರುಮಾಡುತ್ತಾರೆ. ಈ ನಿಯಮ ಇರುವುದು ಜಗತ್ತಿನ ಸುಂದರ ತಾಣಗಳಲ್ಲಿ ಒಂದಾದ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ. ತನ್ನ ಪ್ರಕೃತಿ ಸೌಂದರ್ಯಕ್ಕೆ, ಹಿಮದಿಂದ ಆವೃತವಾದ ಪರ್ವತಗಳಿಗೆ ಮತ್ತು ಮುಖ್ಯವಾಗಿ ತನ್ನ ಶಾಂತಿಯುತ ವಾತಾವರಣಕ್ಕೆ ಸ್ವಿಟ್ಜರ್‌ಲ್ಯಾಂಡ್ ಹೆಸರುವಾಸಿ. ಇಲ್ಲಿನ ಜನ ಶಾಂತಿಯನ್ನು ಎಷ್ಟು ಪ್ರೀತಿಸುತ್ತಾರೆ ಎಂದರೆ, ರಾತ್ರಿ ಹೊತ್ತು ಸಣ್ಣದೊಂದು ಸದ್ದೂ ಅವರಿಗೆ ಕಿರಿಕಿರಿ ಉಂಟುಮಾಡುತ್ತದೆ.
ಅದರಲ್ಲೂ, ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುವವರಿಗೆ ಈ ಸಮಸ್ಯೆ ಹೆಚ್ಚು. ರಾತ್ರಿ ಎಲ್ಲರೂ ಮಲಗಿದ ಮೇಲೆ, ನಿಶ್ಯಬ್ದ ಆವರಿಸಿರುವಾಗ, ಶೌಚಾಲಯದ ಫ್ಲಶ್‌ನ "ಘುಳುಂ" ಶಬ್ದ ಕೂಡ ಪಕ್ಕದ ಮನೆಯವರ ನಿದ್ದೆಗೆಡಿಸಬಹುದು ಎಂದು ಅಲ್ಲಿನ ಜನ ನಂಬುತ್ತಾರೆ. ಹೀಗಾಗಿ, ಅವರು ಇದನ್ನು ಕೇವಲ ಸದ್ದು ಎಂದು ಪರಿಗಣಿಸುವುದಿಲ್ಲ, ಬದಲಾಗಿ ಅದೊಂದು 'ಶಬ್ದ ಮಾಲಿನ್ಯ' ಎಂದೇ ಭಾವಿಸುತ್ತಾರೆ!
ಇದು ಸ್ವಿಟ್ಜರ್‌ಲ್ಯಾಂಡ್‌ನ ರಾಷ್ಟ್ರೀಯ ಕಾನೂನೇನೂ ಅಲ್ಲ. ಅಂದರೆ, ನೀವು ರಾತ್ರಿ ಫ್ಲಶ್ ಮಾಡಿದರೆ ಪೊಲೀಸರು ಬಂದು ನಿಮ್ಮನ್ನು ಅರೆಸ್ಟ್ ಮಾಡುವುದಿಲ್ಲ. ಇದು ಅಲ್ಲಿನ ಜನರು, ಅದರಲ್ಲೂ ಮುಖ್ಯವಾಗಿ ಮನೆ ಮಾಲೀಕರು ತಮ್ಮ ಅಪಾರ್ಟ್‌ಮೆಂಟ್‌ಗಳಲ್ಲಿ ಶಾಂತಿ ಕಾಪಾಡಲು ತಾವೇ ರೂಪಿಸಿಕೊಂಡಿರುವ ಒಂದು ಅಲಿಖಿತ ನಿಯಮ.
ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಮನೆ ಮಾಲೀಕರಿಗೆ ತಮ್ಮ ಕಟ್ಟಡಗಳಿಗೆ ಸಂಬಂಧಿಸಿದಂತೆ ಕೆಲವು ನಿಯಮಗಳನ್ನು ಮಾಡುವ ಅಧಿಕಾರವಿದೆ. ಇದನ್ನು ಅವರು 'ಹೌಸೋರ್ಡ್ನಂಗ್' (Hausordnung) ಅಂದರೆ 'ಮನೆಯ ನಿಯಮಗಳು' ಎಂದು ಕರೆಯುತ್ತಾರೆ. ಕಸವನ್ನು ಹೇಗೆ ವಿಲೇವಾರಿ ಮಾಡಬೇಕು, ರಾತ್ರಿ ಹೊತ್ತು ಜೋರಾಗಿ ಮಾತನಾಡಬಾರದು, ಸಂಗೀತ ಕೇಳಬಾರದು ಎಂಬ ನಿಯಮಗಳ ಜೊತೆಗೆ, ಈ 'ರಾತ್ರಿ 10ರ ನಂತರ ಫ್ಲಶ್ ಮಾಡಬಾರದು' ಎಂಬ ನಿಯಮವನ್ನೂ ಕೆಲವು ಮಾಲೀಕರು ತಮ್ಮ ಬಾಡಿಗೆ ಒಪ್ಪಂದದಲ್ಲಿ ಸೇರಿಸಿರುತ್ತಾರೆ.
ಇದನ್ನು ಮೀರುವುದು ಎಂದರೆ ನಿಮ್ಮ ಮನೆ ಮಾಲೀಕರ ಮತ್ತು ನೆರೆಹೊರೆಯವರ ಜೊತೆಗಿನ ಸಂಬಂಧವನ್ನು ಹಾಳುಮಾಡಿಕೊಂಡಂತೆ. ಪದೇ ಪದೇ ಈ ನಿಯಮ ಮುರಿದರೆ, ನಿಮ್ಮ ಬಗ್ಗೆ ದೂರುಗಳು ಹೆಚ್ಚಾಗಬಹುದು ಅಥವಾ ಬಾಡಿಗೆ ಒಪ್ಪಂದವನ್ನು ನವೀಕರಿಸಲು ಮಾಲೀಕರು ಹಿಂದೇಟು ಹಾಕಬಹುದು. ಒಂದು ರೀತಿ ವಿಚಿತ್ರವಾಗಿದ್ದರು, ಅಲ್ಲಿನ ಜನರ ಪರಿಸರ ನಿಷ್ಠೆಗೆ ಸಲ್ಯೂಟ್ ಹೊಡಿಲೇ ಬೇಕು.