2025 : ಯುಗಾದಿ ಹಬ್ಬದ ಹೊಸ ವರುಷಕ್ಕೆ ಜೀವನ ಬದಲಾಯಿಸುವ ಹಣಕಾಸಿಗೆ ಸಂಬಂಧಪಟ್ಟ ಐದು ಸರಳ ವಿಚಾರ

  • 30 Mar 2025 12:54:26 PM

ಯುಗಾದಿ ಹಬ್ಬದ ಶುಭಾಶಯಗಳು! ಈ ಹೊಸ ವರುಷವು ನಿಮ್ಮ ಜೀವನದಲ್ಲಿ ಹೊಸ ಭರವಸೆಗಳು, ಹೊಸ ಸಂತೋಷಗಳು ಮತ್ತು ಹೊಸ ಅವಕಾಶಗಳನ್ನು ತರಲಿ.

 

ಹಿಂದೂ ಕ್ಯಾಲೆಂಡರ್ ಪ್ರಕಾರ ಯುಗಾದಿ ದಿನದಂದು ಹೊಸ ವರುಷದ ಪ್ರಾರಂಭ. ಹೊಸ ವರುಷ ಬಂತೆಂದರೆ ಜೀವನದಲ್ಲಿ ಹೊಸ ಸಂಕಲ್ಪದ ಕಲ್ಪನೆಗಳು ಜೋರಾಗಿ ನಡೆಯುತ್ತದೆ. ಜೀವನದಲ್ಲಿ ಏನಾದರು ಬದಲಾವಣೆಗಳನ್ನು ತರಬೇಕೆಂಬ ನಿರ್ಧಾರಕ್ಕೆ ಬರುತ್ತೇವೆ ಮತ್ತು ಅದನ್ನು ಜೀವನದಲ್ಲಿ ಅನುಷ್ಠಾನಗೊಳಿಸಲು ಪ್ರಯತ್ನ ಪಡುತ್ತೇವೆ.

 

ಈ ವರುಷದ ಯುಗಾದಿ ನಂತರದ ಜೀವನದಲ್ಲಿ ಮುಂದಿನ ಭವಿಷ್ಯಕ್ಕೆ ಬೇಕಾಗುವ ಹಣಕಾಸಿಗೆ ಸಂಬಂಧಪಟ್ಟ 5 ಸರಳ ವಿಚಾರಗಳನ್ನು ಹೇಳುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ಬನ್ನಿ ನೋಡೋಣ ಆ ಐದು ವಿಚಾರಗಳನ್ನು,

 

50-30-20 ರ ಬಜೆಟ್ ನಿಯಮ

ಏನಿದು 50-30-20 ರ ಬಜೆಟ್ ನಿಯಮ? ಈ ನಿಯಮದ ಪ್ರಯೋಜನವೇನು?

ನಿಮ್ಮ ಮಾಸಿಕ ಆದಾಯ ಏನೇ ಇರಲಿ, ನಿಮ್ಮ ಅಗತ್ಯಗಳಿಗೆ 50% ಖರ್ಚು ಮಾಡಿ. ಇದರಲ್ಲಿ ಮನೆ ಖರ್ಚು ಇರಬಹುದು, ತಿಂಗಳ ಇಎಂಐ ಇರಬಹುದು, ಆಹಾರ, ಉಪಯುಕ್ತತೆಗಳು ಮತ್ತು ಇತರ ಅಗತ್ಯ ವೆಚ್ಚಗಳು ನಿಮ್ಮ ಆದಾಯದ 50% ರಷ್ಟು ಉಪಯೋಗವಾಗುವಂತೆ ನೋಡಿಕೊಳ್ಳಿ.

ನಂತರದ 30% ನಿಮ್ಮ ಆಸೆಗಳಿಗೆ, ನೀವು ಜೀವನದಲ್ಲಿ ಆನಂದಿಸಲು ಬಯಸುವ ವಿಷಯಗಳಿಗೆ ಖರ್ಚು ಮಾಡಿ. ನೀವು ಹಣ ಸಂಪಾದಿಸುತ್ತಿರುವಾಗ, ನಿಮ್ಮ ಜೀವನದಲ್ಲಿ ನಿಮಗೆ ಬೇಕಾದ ಸೌಕರ್ಯವನ್ನು ತರವುದು ಸಹ ಬಹಳ ಮುಖ್ಯ.

ಆದರೆ, ಉಳಿದ 20% ಹೂಡಿಕೆಗಳಿಗೆ ಹೋಗಬೇಕು. ಇದನ್ನು ಸಾಧ್ಯವಾದಷ್ಟು ಅನ್ವಹಿಸಲು ಪ್ರಯತ್ನ ಪಡಿ. ಇದರಿಂದ ಜೀವನದಲ್ಲಿ ಬಹಳಷ್ಟು ಬದಲಾವಣೆಗಳನ್ನು ಕಾಣುತ್ತೀರಿ. ಯಾವುದೇ ರೀತಿಯ ಹೂಡಿಕೆಗಳಾಗಿರಬಹುದು, ತಿಂಗಳಿಗೆ 20% ಉಳಿತಾಯ ಮಾಡುತ್ತಾ ಹೋಗಿ. ಯಾವುದೇ ಕಾರಣಕ್ಕೆ ಆ ಹಣವನ್ನು ಅನಗತ್ಯ ಕೆಲಸಗಳಿಗೆ ಖರ್ಚು ಮಾಡಿ ಮುಂದೆ ಪಶ್ಚಾತಾಪ ಪಡೆಯುವುದು ಸರಿಯಲ್ಲ.

 

ನೀವು ಬಚ್ಚಿಟ್ಟ ಆದಾಯದ 20% ಹೂಡಿಕೆ ಮಾಡಿ

ಮೇಲೆ ತಿಳಿಸಿದಂತೆ ನಿಮ್ಮ ತಿಂಗಳ 20% ಆದಾಯವನ್ನು ಸರಿಯಾದ ಸಮಯ ಮತ್ತು ಸಂದರ್ಭ ನೋಡಿ ಹೂಡಿಕೆ ಮಾಡಲು ಶುರು ಮಾಡಿ. ಒಂದು ಒಳ್ಳೆಯ ಮೊತ್ತವಾದ ಕೂಡಲೇ ಭೂಮಿ ಖರೀದಿಗೆ ಹೂಡಿಕೆ ಮಾಡಬಹುದು, ಅಥವಾ ಷೇರು ಮಾರ್ಕೆಟ್ ನಲ್ಲಿ ಮಾಡಬಹುದು, ಇಲ್ಲವೇ ಸರಕಾರಿ ಬಾಂಡ್, ಇನ್ಶೂರೆನ್ಸ್ ಇತ್ಯಾದಿ. ಈ ರೀತಿಯ ಹೂಡಿಕೆಯಿಂದ ನಿಮ್ಮ ಕೈಯಲ್ಲಿದ್ದ ಹಣ ನಿಮಗೆ ಗೊತ್ತಿಲ್ಲದೇ ದ್ವಿಗುಣವಾಗುವುದು.

ಸೂಚನೆ : ಯಾವುದೇ ಹೂಡಿಕೆ ಮಾಡುವ ಮೊದಲು, ಆ ಹೂಡಿಕೆಯ ಬಗ್ಗೆ ಸರಿಯಾಗಿ ತಿಳಿದು, ಅನುಭವಿಗಳು ಮತ್ತು ಸಂಬಂಧಪಟ್ಟ ಹೂಡಿಕೆಯ ವ್ಯಕ್ತಿಗಳ ಸಲಹೆ ಪಡೆದ ನಂತರವೇ ಮುಂದುವರಿಸಿ, ಇಲ್ಲದೆ ಹೋದರೆ ಕೈ ಸುಟ್ಟುಗೊಳ್ಳುವ ಕೆಲಸವಾಗಬಹುದು.

 

ಯಾವಾಗಲು ನಿಮ್ಮ ಶಾಪಿಂಗ್ ನ ಪಟ್ಟಿ ಮಾಡಿಕೊಳ್ಳಿ

ಈ ತಂತ್ರವು ಹಠಾತ್ ಖರೀದಿಗಳನ್ನು ತಪ್ಪಿಸಲು ಮತ್ತು ಬಜೆಟ್‌ನಲ್ಲಿ ಉಳಿಯಲು ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ಶಾಪಿಂಗ್ ಪಟ್ಟಿಯನ್ನು ಮುಂಚಿತವಾಗಿ ಸಿದ್ಧಪಡಿಸುವ ಮೂಲಕ, ನೀವು ಅಗತ್ಯ ವಸ್ತುಗಳ ಮೇಲೆ ಕೇಂದ್ರೀಕರಿಸುತ್ತೀರಿ ಮತ್ತು ಅನಗತ್ಯ ಖರ್ಚುಗಳನ್ನು ಕಡಿಮೆ ಮಾಡಲು ಇದು ಸಹಕಾರಿಯಾಗುತ್ತದೆ. ಅನಗತ್ಯ ವಸ್ತುಗಳನ್ನು ಖರೀದಿ ಮಾಡುವುದರಿಂದ ನಿಮ್ಮ ಕೈಯಲ್ಲಿದ್ದ ಹಣ ಖರ್ಚು ಆಗುವದರ ಜೊತೆಗೆ ನಿಮಗೆ ಹೆಚ್ಚಿನ ತಲೆಬಿಸಿ ನೀಡುತ್ತದೆ. ಆದ್ದರಿಂದ ಯಾವಾಗಲು ಸ್ಮಾರ್ಟ್ ವೇ ಶಾಪಿಂಗ್ ಮಾಡಿ.

 

ಹಣದ ವಿಷಯದಲ್ಲಿ ಸರಿಯಾದ ಮನಸ್ಥಿತಿಯನ್ನು ಅಳವಡಿಸಿ

ಇದು ಬಹಳ ಮುಖ್ಯವಾದ ವಿಷಯ. ಹಣದ ವಿಷಯದಲ್ಲಿ ಎರಡು ರೀತಿಯ ಮನಸ್ಥಿತಿಗಳಿವೆ: ಒಂದು "ಕಳಪೆ ಮನಸ್ಥಿತಿ" ಮತ್ತು ಇನ್ನೊಂದು "ಸಂಪತ್ತಿನ ಮನಸ್ಥಿತಿ". ಕಳಪೆ ಮನಸ್ಥಿತಿ ಹೇಳುತ್ತದೆ - "ನಾನು ಮೊದಲು ನನ್ನ ಅಗತ್ಯಗಳಿಗಾಗಿ ಖರ್ಚು ಮಾಡಿ ನಂತರ ಏನಾದರೂ ಉಳಿದರೆ, ಅದನ್ನು ಹೂಡಿಕೆ ಮಾಡುತ್ತೇವೆ." ಮತ್ತೊಂದೆಡೆ, ಸಂಪತ್ತಿನ ಮನಸ್ಥಿತಿ ಹೇಳುತ್ತದೆ, "ನಾನು ಮೊದಲು ನನ್ನ ಭವಿಷ್ಯಕ್ಕಾಗಿ ಹೂಡಿಕೆ ಮಾಡುತ್ತೇನೆ, ಮತ್ತು ಅದರ ನಂತರ ಉಳಿದಿರುವ ಎಲ್ಲವನ್ನೂ ನನ್ನ ಅಗತ್ಯಗಳಿಗಾಗಿ ಖರ್ಚು ಮಾಡುತ್ತೇನೆ." ನನ್ನ ಪ್ರಕಾರ ನೀವು ಸಂಪತ್ತಿನ ಮನಸ್ಥಿತಿಯನ್ನು ನಿಮ್ಮದಾಗಿಸಿಕೊಂಡರೆ ನಿಮ್ಮ ಭವಿಷ್ಯ ಸಂಪದ್ಭರಿತವಾಗಿರುತ್ತದೆ.

 

ಮೊದಲ ಕೋಟಿ ಸವಾಲು

ಬಹಳ ಅಶಕ್ತಿದಾಯಕ ಮತ್ತು ತುಂಬಾ ಪ್ರಯತ್ನದಾಯಕ ಕೆಲಸ. ಮೊದಲ ಕೋಟಿ ಗಳಿಸುವುದು ಅತ್ಯಂತ ಕಷ್ಟಕರ ಮತ್ತು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಆದರೆ ನೀವು ಅದನ್ನು ತಲುಪಿದ ನಂತರ, ನಂತರದ ಕೋಟಿಗಳು ಹೆಚ್ಚು ವೇಗವಾಗಿ ಬರುತ್ತವೆ. ಮೊದಲ ಕೋಟಿ ಗಳಿಸುವುದು ಅತ್ಯಂತ ಮುಖ್ಯವಾದ ಮೈಲಿಗಲ್ಲು, ತಾಳ್ಮೆ ಮತ್ತು ಶಿಸ್ತಿನ ವಿಷಯ. ನಿಯಮಿತ ಹೂಡಿಕೆ ಮತ್ತು ಸ್ಥಿರವಾದ ಆದಾಯವು ನಿಮ್ಮನ್ನು ಆ ಮೈಲಿಗಲ್ಲಿಗೆ ಎಷ್ಟು ಕರೆದೊಯ್ಯುತ್ತದೆ ಮತ್ತು ನೀವು ಅದನ್ನು ಯಾವಾಗ ತಲುಪುತ್ತೀರಿ ಎಂಬುದನ್ನು ನೀವು ನಿರ್ಧರಿಸಬೇಕು. ಈ ಪ್ರಯಾಣವನ್ನು ಮಾಡಲು ನೀವು ಸ್ಥಿರವಾದ ಬದ್ಧತೆಯೊಂದಿಗೆ ಪ್ರಾರಂಭಿಸಬೇಕು. ಒಮ್ಮೆ ನೀವು ಆ ದಡ ತಲುಪಿದಿರಿ ಅಂದುಕೊಳ್ಳಿ, ನೀವು ಜೀವನದಲ್ಲಿ ಸಾಧನೆ ಮಾಡಿದ ವ್ಯಕ್ತಿಗಳಾಗಿ ಸಮಾಜದಲ್ಲಿ ಬಿಂಬಿಸುತ್ತೀರಿ.

 

ಬಹಳಷ್ಟು ಈ ರೀತಿಯ ವಿಚಾರಗಳು ನಿಮ್ಮನ್ನು ಜೀವನದಲ್ಲಿ ಆರ್ಥಿಕ ಸ್ಥಿರ ( Financial stable ) ವ್ಯಕ್ತಿಯಾಗಿ ಪರಿವರ್ತಿಸಬಹುದು. ಜೀವನವನ್ನು ಒಂದು ಸವಾಲಾಗಿ ತೆಗೆದುಕೊಂಡು ಮುನ್ನಡೆದರೆ ಯಶಸ್ಸು ಖಂಡಿತ.