ದಕ್ಷಿಣ ಭಾರತದ ಮದುವೆಗಳಲ್ಲಿ, ಮದುವೆಯಾದ ನಂತರ, ಜೋಡಿಯನ್ನು ಮಂಟಪದಿಂದ ಹೊರಾಂಗಣಕ್ಕೆ ಕರೆದೊಯ್ಯಲಾಗುತ್ತದೆ. ಪ್ರಕಾಶಮಾನವಾಗಿ ಗೋಚರಿಸುವ ನಕ್ಷತ್ರದಿಂದ ಪ್ರಾರಂಭಿಸಿ ಅರುಂಧತಿ ನಕ್ಷತ್ರವನ್ನು ಕಂಡುಹಿಡಿಯಲು ಅವರಿಗೆ ಸೂಚನೆಗಳನ್ನು ನೀಡಲಾಗುತ್ತದೆ. ನಕ್ಷತ್ರ ಕಾಣಿಸದಿದ್ದರೂ ವರನು ವಧುವಿಗೆ ಅರುಂಧತಿ ನಕ್ಷತ್ರವನ್ನು ತೋರುವಂತೆ ಕೈ ಬೆರಳನ್ನು ಚಾಚುತ್ತಾನೆ. ಈ ಆಚರಣೆಯ ಹಿಂದಿನ ಉದ್ದೇಶವೇನು ಎಂಬುದನ್ನು ಇಂದು ತಿಳಿಸುತ್ತೇವೆ.
ಇದು ಕೇವಲ ಅರುಂಧತಿ ನಕ್ಷತ್ರವಲ್ಲ, ಬದಲಿಗೆ ನಾವು ಯಾವಾಗಲೂ ಅರುಂಧತಿ ವಸಿಷ್ಠ ಎಂಬ ಹೆಸರನ್ನು ಜೋಡಿಯಾಗಿ ತೆಗೆದುಕೊಳ್ಳಬೇಕು. ವೈದಿಕ ಗ್ರಂಥಗಳಲ್ಲಿ ಋಷಿ ವಸಿಷ್ಠ (ಶ್ರೀರಾಮನ ಗುರು) ದೇವಿ ಅರುಂಧತಿಯನ್ನು ವಿವಾಹವಾದರು. ಅವರಿಬ್ಬರೂ ಪರಿಪೂರ್ಣ ದಂಪತಿಯಾಗಿದ್ದರು. ಇಬ್ಬರೂ ಬೇರೆ ಬೇರೆ ವರ್ಣ ವ್ಯವಸ್ಥೆಯಿಂದ ಬಂದರೂ, ಅವರು ಒಬ್ಬರನ್ನೊಬ್ಬರು ಗೌರವಿಸುತ್ತಿದ್ದರು ಮತ್ತು ಎಲ್ಲರಿಂದ ಗೌರವವನ್ನು ಪಡೆದಿದ್ದರು. ಅವರ ವೈವಾಹಿಕ ಜೀವನ ಎಲ್ಲಾ ದಂಪತಿಗೆ ಮಾದರಿಯಾಗಿತ್ತು. ಅವರು ಒಬ್ಬರಿಗೊಬ್ಬರು ಹೇಗಿದ್ದರು ಎಂಬುದನ್ನು ಸೂಚಿಸುವಂತೆ ಜೋಡಿಯಾಗಿರುವ ಎರಡು ನಕ್ಷತ್ರಪುಂಜಗಳಿಗೆ ಅರುಂಧತಿ ವಸಿಷ್ಠ ಎಂದು ಹೆಸರಿಸಲಾಗಿದೆ.
ಅರುಂಧತಿ ವಸಿಷ್ಠ ಎಂಬುದು ಎರಡು ನಕ್ಷತ್ರಪುಂಜಗಳ ರಾಶಿ. ಸಾಮಾನ್ಯವಾಗಿ ಎರಡು ನಕ್ಷತ್ರಗಳ ಪುಂಜವು ಜೊತೆಗಿದ್ದಾಗ ಒಂದು ನಕ್ಷತ್ರವು ಮಧ್ಯದಲ್ಲಿದ್ದರೆ ಇನ್ನೊಂದು ಕೇಂದ್ರ ನಕ್ಷತ್ರದ ಸುತ್ತ ಸುತ್ತುತ್ತಿರುತ್ತದೆ. ಆದರೆ ಅರುಂಧತಿ ವಸಿಷ್ಠ ನಕ್ಷತ್ರಪುಂಜಗಳು ಹಾಗಲ್ಲ. ಅವು ಪರಸ್ಪರ ಒಂದನ್ನೊಂದು ಸುತ್ತುತ್ತವೆ. ಎರಡರಲ್ಲಿ ಯಾವುದೇ ಒಂದು ಮಾತ್ರ ಕೇಂದ್ರದಲ್ಲಿ ಉಳಿಯದೆ ಸಮಾನವಾಗಿ ಒಂದರ ಸುತ್ತ ಮತ್ತೊಂದು ಸುತ್ತುತ್ತದೆ. ಜೊತೆಯಾಗಿ ಚಲಿಸುತ್ತವೆ. ವಿವಾಹಿತ ದಂಪತಿ ಹೇಗಿರಬೇಕು ಎಂಬುದನ್ನು ಇದು ಸೂಚಿಸುತ್ತದೆ. ಅಂದರೆ, ಆದರ್ಶ ದಾಂಪತ್ಯದಲ್ಲಿ ಯಾರೊಬ್ಬರದೂ ಮೇಲುಗೈಯಾಗದೆ ಇಬ್ಬರೂ ಸಮಾನ ಸ್ಥಾನ ಹೊಂದಿರಬೇಕು. ಇದರಲ್ಲಿ ಇನ್ನೊಂದು ಆಶ್ಚರ್ಯಕರ ಸಂಗತಿಯೆಂದರೆ, ನಮ್ಮ ಪೂರ್ವಜರು ಅಂತಹ ಅವಳಿ ನಕ್ಷತ್ರ ವ್ಯವಸ್ಥೆಯು ಅಸ್ತಿತ್ವದಲ್ಲಿರುವುದನ್ನು ಆಧುನಿಕ ಉಪಕರಣಗಳ್ಯಾವುದರ ಸಹಾಯವೂ ಇಲ್ಲದೆ ಗುರುತಿಸಿದ್ದರು.
ಆದ್ದರಿಂದ, ಹಳೆಯ ದಿನಗಳಲ್ಲಿ ಪುರೋಹಿತರು ವಿವಾಹಿತ ದಂಪತಿಗಳಿಗೆ ಈ ನಕ್ಷತ್ರಪುಂಜವನ್ನು ತೋರಿಸಿ ದಾಂಪತ್ಯ ಜೀವನ ಹೀಗಿರಲಿ ಎಂದು ಹಾರೈಸುತ್ತಿದ್ದರು. ಆದರೆ ಇಂದು ಆಚರಣೆಯ ಉದ್ದೇಶವರಿಯದೆ ಸುಮ್ಮನೆ ಏನೋ ತಮಾಷೆಯಾಗಿ ಆಕಾಶ ನೋಡಿ ಬರುತ್ತಾರೆ.





