ಕಾಲ ಕಳೆದಂತೆ ಸಂಬಂಧಗಳ ಮೌಲ್ಯ ಕುಸಿಯುತ್ತಿದೆ. ಮನುಷ್ಯ ಸಂಬಂಧಗಳು ಎಲ್ಲಾ ಮೌಲ್ಯಕ್ಕಿಂತಲೂ ಮಿಗಿಲಾದುದು ಎಂಬ ಕಾಲವೊಂದಿತ್ತು. ಪ್ರಸ್ತುತ ವೇಗವಾಗಿ ಬೆಳೆಯುತ್ತಿರುವ ಆಧುನಿಕ ಯುಗದಲ್ಲಿ ವ್ಯಕ್ತಿ - ವ್ಯಕ್ತಿಗಳ ನಡುವೆ ಸಂಬಂಧದ ಅರಿವೇ ಇಲ್ಲದಂತಾಗಿದೆ. ವ್ಯಕ್ತಿಗಳನ್ನು ಪ್ರೀತಿಸುವ ಬದಲು ವಸ್ತುಗಳ ಮೇಲಿನ ಪ್ರೀತಿ ಅಗಾಧವಾಗಿದೆ. ವಸ್ತುಗಳಿಗೆ ಇರುವ ಬೆಲೆ ವ್ಯಕ್ತಿಗಳಿಗೆ ಇಲ್ಲದಂತಾಗಿದೆ. ತನ್ನ ಗಂಡ, ಹೆಂಡತಿಗೆ ಅಥವಾ ಹೆಂಡತಿ, ಗಂಡನಿಗೆ ಕೊಡುವ ಪ್ರಾಮುಖ್ಯತೆಗಿಂತ ತಮ್ಮ ಮೊಬೈಲ್ ಅಥವಾ ವಸ್ತುವಿನ ಮೇಲಿನ ವ್ಯಾಮೋಹ ಅಪಾರವಾಗಿದೆ. ತಮ್ಮ ಮಕ್ಕಳೊಂದಿಗೆ ಕಳೆಯುವ ಸಮಯವು ಟಿವಿ, ಮೊಬೈಲ್ ಹಾಗೂ ರೀಲ್ಸ್ ಗಳ ಪಾಲಾಗಿದೆ.
ಹಾಗಾದರೆ ಮನುಷ್ಯ ಸಂಬಂಧಗಳ ಮೌಲ್ಯ ಎತ್ತ ಸಾಗುತ್ತಿದೆ?.... ಎಂಬುದರ ಕುರಿತು ನಮ್ಮಲ್ಲಿ ನಾವೇ ಚಿಂತಿಸಬೇಕಾದ ಅನಿವಾರ್ಯತೆ ನಮ್ಮೊಳಗೇ.. ನಡೆಯಬೇಕಿದೆ. ಪ್ರತಿಯೊಬ್ಬರು ಒಂದು ಕ್ಷಣ ತಮ್ಮ ಅಂತರಾವಲೋಕನ ಮಾಡಿಕೊಂಡರೆ ನಾವು ರಕ್ತ ಸಂಬಂಧಕ್ಕೋ, ಸ್ನೇಹ ಸಂಬಂಧಕ್ಕೋ ಕೊಡುತ್ತಿರುವ ಮಹತ್ವ ಅರಿವಿಗೆ ಬರುತ್ತಿದೆ. ಇಂದು ವಸ್ತುಗಳ ಮೇಲಿನ ಪ್ರೀತಿಯಿಂದಾಗಿ ತಮ್ಮ ಮಧುರವಾದ ಸಂಬಂಧಗಳ ಕಲರವಕ್ಕಿಂತ ಕರ್ಕಶ ಕಲಹಗಳು ದ್ವೇಷ -ಅಸೂಯೆಗಳು, ಅಪನಂಬಿಕೆಗಳು ನಮ್ಮ ಮಾನಸಿಕ ಬದುಕಿನಲ್ಲಿ ತಾಂಡವವಾಡುತ್ತಿವೆ.
ಬದಲಾಗಬೇಕಿದೆ ನಾವುಗಳು... ನಮ್ಮನ್ನು ಪ್ರೀತಿಸುವ ಸಂಬಂಧಗಳಿಗೆ ಬೆಲೆ ಕೊಡಬೇಕಿದೆ. ನಮಗಾಗಿ ಕಾಯುತ್ತಿರುವ ಜೀವಗಳಿಗೆ ಸಮಯ ನೀಡಬೇಕಿದೆ. ಸಂಬಂಧಗಳ ಬೆಸುಗೆಯನ್ನು ಗಟ್ಟಿಗೊಳಿಸಬೇಕಾದ ಸವಾಲುಗಳು ನಮ್ಮ ಕಣ್ಣ ಮುಂದಿವೆ. ನಮ್ಮ ಮುಂದಿನ ಬದುಕಿಗೆ ಪ್ರೀತಿಯ ಆಸರೆಯಾಗಬೇಕಾದ ನಮ್ಮ ಮಕ್ಕಳ ಆಂತರ್ಯದ ಭಾವನೆಗಳಿಗೆ ಸ್ಪಂದಿಸಬೇಕಿದೆ.. ಇದುವರೆಗೆ ಆಗಿರುವ ತಪ್ಪುಗಳನ್ನು ಕ್ಷಮಿಸಿ, ಹೊಂದಾಣಿಕೆಯಿಂದ ಬದುಕಿ, ಸಂಬಂಧಗಳನ್ನು ಗಟ್ಟಿಗೊಳಿಸಬೇಕಿದೆ. "ಸಂಬಂಧ ಎಂಬುದು ಅರಿತು ತಿದ್ದುವಂತೆ ಇರಬೇಕೆ ಹೊರತು ಹರಿದು ತಿನ್ನುವಂತೆ ಇರಬಾರದು" ಹಾಗಾಗಿ ಕಟ್ಟೋಣ ಹೊಸ ಬದುಕನ್ನು ಸಂಬಂಧಗಳ ಬುತ್ತಿಯೊಂದಿಗೆ.....
— ಇತೀ, ಅತಿಥಿ ಬರಹ





