22 December 2025 | Join group

ಸರಿಯಾದ ನಿದ್ರೆ ಇಲ್ಲದಿದ್ದರೆ ಏನಾಗುತ್ತದೆ? ಉತ್ತಮ ನಿದ್ರೆಗೆ ಈ ಸರಳ ಉಪಾಯಗಳು

  • 19 Dec 2025 12:52:35 AM

ನಿದ್ರೆ: ಆರೋಗ್ಯಕರ ಜೀವನದ ಅಡಿಪಾಯ… ಕೆಲವರಿಗೆ ನಿದ್ರೆ ಅಂದರೆ ಬಹಳ ಇಷ್ಟ, ಆದರೆ ಇನ್ನು ಕೆಲವರಿಗೆ ನಿದ್ರೆ ಬರೋದೇ ಇಲ್ಲ ಎಂಬ ಕಷ್ಟ. ಕೆಲವರಿಗೆ ರಾತ್ರಿ ಇಡೀ ನಿದ್ದೆ ಇಲ್ಲ; ಇನ್ನು ಕೆಲವರಿಗೆ ‘ಸಂತೆಯಲ್ಲೂ ನಿದ್ರೆ’ ಎಂಬಂತಿದೆ.

 

ದಿನವಿಡೀ ಕೆಲಸ ಮಾಡಿ, ಓಡಾಡಿ ಮನೆಗೆ ಬಂದು ಚೆನ್ನಾಗಿ ನಿದ್ದೆ ಮಾಡಿದರೆ ಸಾಕಪ್ಪ ಎಂದುಕೊಳ್ಳುವವರು ಬಹಳಷ್ಟಿದ್ದಾರೆ. ನಿದ್ರೆ ಸರಿಯಾಗಿ ಬಂದರೆ ಮರುದಿನ ಫ್ರೆಶ್ ಆಗಿರಬಹುದು. ಏಕೆಂದರೆ ನಿದ್ರೆ ಎಲ್ಲರಿಗೂ ಅತ್ಯಂತ ಅಗತ್ಯವಾದ ಅಂಶ. ಮನುಷ್ಯರಿಗೆ ಮಾತ್ರವಲ್ಲ, ಪ್ರಾಣಿ–ಪಕ್ಷಿಗಳಿಗೂ ಸರಿಯಾದ ನಿದ್ರೆ ಬೇಕೇ ಬೇಕು.

 

ಆದರೆ ಕಾಲ ಬದಲಾಗಿದೆ. ಹಿಂದಿನ ದಿನಗಳಲ್ಲಿ ಕತ್ತಲಾಗುತ್ತಿದ್ದಂತೆ ಜನ ಹಾಸಿಗೆ ಹಿಡಿದು ನಿದ್ರೆಗೆ ಜಾರುತ್ತಿದ್ದರು. ಆದರೆ ಇಂದಿನ ಆಧುನಿಕ ಯುಗದಲ್ಲಿ ರಾತ್ರಿ ಇಡೀ ನಿದ್ರೆ ಮಾಡದೆ ಮೋಜು–ಮಸ್ತಿ, ಅಥವಾ ಮನೆಯಲ್ಲೇ ಕುಳಿತು ಮೊಬೈಲ್, ಟಿವಿ ನೋಡುತ್ತಾ ಕಾಲ ಕಳೆಯುವ ಯುವಜನತೆ ಹೆಚ್ಚಾಗಿದೆ. ಕೆಲವರಿಗೆ ಜೀವನದ ಸಮಸ್ಯೆಗಳ ಕಾರಣದಿಂದ ನಿದ್ರೆ ಬರದೇ ಇದ್ದರೆ, ಇನ್ನೂ ಕೆಲವರು ರಾತ್ರಿಯನ್ನು ಹಗಲು ರೀತಿಯಲ್ಲೇ ಕಳೆಯುವ ಮನಸ್ಥಿತಿಯಲ್ಲಿರುತ್ತಾರೆ. ಒಟ್ಟಿನಲ್ಲಿ ಸರಿಯಾದ ಹಾಗೂ ಆಹ್ಲಾದಕರ ನಿದ್ರೆ ಜೀವನದಲ್ಲಿ ಅತ್ಯಂತ ಮಹತ್ವದ್ದು.

 

ಇತ್ತೀಚಿನ ದಿನಗಳಲ್ಲಿ ಮಲಗಿದ ತಕ್ಷಣ ನಿದ್ರೆ ಬರುವುದು ಕನಸಿನ ಮಾತಾಗಿದೆ. ನಿದ್ರೆ ಬರದೇ ಹಾಸಿಗೆಯಲ್ಲಿ ಹೊರಳಾಡುವವರೇ ಹೆಚ್ಚು. ಕೆಲಸದ ಒತ್ತಡ, ಜೀವನದ ಸಮಸ್ಯೆಗಳು, ಕೆಟ್ಟ ಚಟಗಳು, ಮೊಬೈಲ್ ಬಳಕೆಯ ಅತಿಯಾದ ಅಭ್ಯಾಸ ಹೀಗೆ ಹಲವು ಕಾರಣಗಳು ಇದಕ್ಕೆ ಕಾರಣವಾಗಬಹುದು. ಆದರೆ ಯಾವಾಗ ನಿದ್ರೆಯನ್ನು ಸರಿಯಾಗಿ ನಿರ್ವಹಿಸಲು ವಿಫಲರಾಗುತ್ತೇವೋ, ಆಗ ಅದರ ದುಷ್ಪರಿಣಾಮಗಳು ಆರೋಗ್ಯದ ಮೇಲೆ ಸ್ಪಷ್ಟವಾಗಿ ಬೀರುತ್ತವೆ.

 

ಸರಿಯಾಗಿ ನಿದ್ರೆ ಮಾಡದಿದ್ದರೆ ಬೆಳಿಗ್ಗೆ ಸಮಯದಲ್ಲಿ ಅತಿಯಾದ ನಿದ್ರೆ, ಕೆಲಸಗಳಲ್ಲಿ ಅಡ್ಡಿ, ಆಯಾಸ, ಸುಸ್ತು, ತಲೆನೋವು, ತೂಕ ಹೆಚ್ಚಳ, ಮುಖದ ಕಾಂತಿ ಕಡಿಮೆಯಾಗುವುದು, ಡಾರ್ಕ್ ಸರ್ಕಲ್, ಮೊಡವೆಗಳಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಜೊತೆಗೆ ಏಕಾಗ್ರತೆಯ ಕೊರತೆಯೂ ಕಾಡುತ್ತದೆ.

 

ಹಾಗಾದರೆ, ಸರಳ ಉಪಾಯಗಳನ್ನು ಅನುಸರಿಸಿ ಉತ್ತಮ ನಿದ್ರೆ ಪಡೆಯುವುದು ಹೇಗೆ ಎಂಬುದನ್ನು ನೋಡೋಣ.

 

1) ಊಟದ ಸಮಯಕ್ಕೆ ಗಮನ ಕೊಡಿ

ಬೇಗ ಊಟ ಮಾಡುವುದು ಕೆಲವರಿಗೆ ಕಷ್ಟವಾಗಬಹುದು. ಆದರೆ ಸೂರ್ಯಾಸ್ತದ ನಂತರವೇ ಊಟ ಮಾಡುವವರಿಗಿಂತ, ಮಲಗುವ ಸಮಯಕ್ಕಿಂತ ಕನಿಷ್ಠ 3 ಗಂಟೆಗಳ ಮೊದಲು ರಾತ್ರಿ ಊಟ ಮುಗಿಸುವವರಿಗೆ ಉತ್ತಮ ನಿದ್ರೆ ಬರುತ್ತದೆ. ಜೈನ ಸಂಪ್ರದಾಯದಲ್ಲಿಯೂ ಸೂರ್ಯಾಸ್ತದ ಮೊದಲೇ ಊಟ ಮುಗಿಸುವ ಪದ್ಧತಿಯಿದೆ. ತಡವಾಗಿ ಊಟ ಮಾಡಿದರೆ ನಿದ್ರೆ ಮಾತ್ರವಲ್ಲ, ದೇಹದಲ್ಲಿ ಬೊಜ್ಜು ಹೆಚ್ಚಾಗುವ ಸಾಧ್ಯತೆಯೂ ಇರುತ್ತದೆ.

 

2) ಮಲಗುವ ಮುನ್ನ ಮೊಬೈಲ್ ಮತ್ತು ಟಿವಿಯಿಂದ ದೂರಿರಿ

ಹಾಸಿಗೆಯಲ್ಲೇ ಮಲಗಿ ಮೊಬೈಲ್ ನೋಡುವುದು ಅಥವಾ ಮಲಗುವವರೆಗೂ ಟಿವಿ ನೋಡುವುದು ಇಂದಿನ ಸಾಮಾನ್ಯ ಅಭ್ಯಾಸವಾಗಿದೆ. ಆದರೆ ಸ್ಕ್ರೀನ್‌ಗಳಿಂದ ಹೊರಹೊಮ್ಮುವ ನೀಲಿ ಬೆಳಕು ನಿದ್ರೆಗೆ ಸಹಾಯಕವಾದ ಹಾರ್ಮೋನ್‌ಗಳ ಉತ್ಪತ್ತಿಯನ್ನು ಕಡಿಮೆ ಮಾಡುತ್ತದೆ. ಪರಿಣಾಮವಾಗಿ ನಿದ್ರೆ ತಡವಾಗುತ್ತದೆ. ಆದ್ದರಿಂದ ಮಲಗುವ ಒಂದು ಗಂಟೆ ಅಥವಾ ಕನಿಷ್ಠ ಅರ್ಧ ಗಂಟೆ ಮೊದಲು ಮೊಬೈಲ್ ಹಾಗೂ ಟಿವಿ ಬಳಕೆಯನ್ನು ನಿಲ್ಲಿಸುವುದು ಉತ್ತಮ.

 

3) ಸಂಜೆ ನಂತರ ಟೀ–ಕಾಫಿ ಬೇಡ

ಮಲಗುವ ಮುನ್ನ ಟೀ ಅಥವಾ ಕಾಫಿ ಕುಡಿಯುವ ಅಭ್ಯಾಸವನ್ನು ಬಿಡಿ. ವಿಶೇಷವಾಗಿ ಸಂಜೆ 7 ಗಂಟೆಯ ನಂತರ ಟೀ–ಕಾಫಿಯಿಂದ ದೂರವೇ ಇರಿ. ಇವು ನಿದ್ರೆಗೆ ಅಡ್ಡಿಯಾಗುವ ಪ್ರಮುಖ ಕಾರಣಗಳಾಗಿವೆ.

 

4) ತಲೆಸ್ನಾನ ನಿದ್ರೆಗೆ ಸಹಕಾರಿ

ಮಲಗುವ 2–3 ಗಂಟೆಗಳ ಮೊದಲು ಉಗುರುಬೆಚ್ಚಗಿನ ನೀರಿನಲ್ಲಿ ತಲೆಸ್ನಾನ ಮಾಡುವುದು ಉತ್ತಮ. ಇದು ಸ್ನಾಯುಗಳನ್ನು ಸಡಿಲಗೊಳಿಸಿ, ಒತ್ತಡವನ್ನು ಕಡಿಮೆ ಮಾಡಿ, ಆಯಾಸ ನಿವಾರಿಸುತ್ತದೆ. ಪರಿಣಾಮವಾಗಿ ಉತ್ತಮ ನಿದ್ರೆ ಬರುತ್ತದೆ.

 

5) ಊಟದ ಬಳಿಕ ಸ್ವಲ್ಪ ನಡೆ ಮತ್ತು ಬಿಸಿ ನೀರು

ಊಟದ ನಂತರ ಸ್ವಲ್ಪ ನಡೆಯುವುದರಿಂದ ಜೀರ್ಣಕ್ರಿಯೆ ಸುಗಮವಾಗುತ್ತದೆ. ಜೀರ್ಣಕ್ರಿಯೆ ಉತ್ತಮವಾದಷ್ಟು ನಿದ್ರೆಯೂ ಉತ್ತಮವಾಗುತ್ತದೆ. ಜೊತೆಗೆ ಊಟದ ಬಳಿಕ ಸ್ವಲ್ಪ ಬಿಸಿ ನೀರು ಕುಡಿಯುವುದರಿಂದ ಅಜೀರ್ಣ ಸಮಸ್ಯೆಗಳು ಕಡಿಮೆಯಾಗುತ್ತವೆ ಮತ್ತು ನಿದ್ರೆಗೆ ಸಹಾಯವಾಗುತ್ತದೆ.

 

ಸರಿಯಾದ ಜೀವನಶೈಲಿ, ಸಮಯಪಾಲನೆ ಮತ್ತು ಕೆಲವು ಸರಳ ಅಭ್ಯಾಸಗಳನ್ನು ಅನುಸರಿಸಿದರೆ, ಉತ್ತಮ ಮತ್ತು ಆಳವಾದ ನಿದ್ರೆ ಪಡೆಯುವುದು ಕಷ್ಟವಲ್ಲ. ಉತ್ತಮ ನಿದ್ರೆ ಎಂದರೆ ಉತ್ತಮ ಆರೋಗ್ಯ ಅದನ್ನು ಮರೆಯಬೇಡಿ. ಈ ಮಾಹಿತಿ ಉಪಯುಕ್ತವೆನಿಸಿದರೆ ಶೇರ್ ಮಾಡಿ.