ಯುಎಇಯಲ್ಲಿ ಜನಿಸಿದ ಭಾರತೀಯ ಮಕ್ಕಳಿಗೆ ಪಾಸ್‌ಪೋರ್ಟ್ ಪಡೆಯುವುದು ಕಡ್ಡಾಯ ಪ್ರಕ್ರಿಯೆಯಾಗಿದ್ದು, ಇದಕ್ಕಾಗಿ ಕೆಲವು ಪ್ರಮುಖ ನಿಯಮಗಳನ್ನು ಕಾನ್ಸುಲೇಟ್ ಜನರಲ್ ಆಫ್ ಇಂಡಿಯಾ (Consulate General of India)ದ ಮಾರ್ಗದರ್ಶನವನ್ನು ಅನುಸರಿಸಬೇಕಾಗುತ್ತದೆ. ಹಲವಾರು ಪಾಲಕರು ಸಣ್ಣ ತಪ್ಪುಗಳಿಂದ ಅರ್ಜಿಗಳು ತಿರಸ್ಕೃತವಾಗುವ ಪರಿಸ್ಥಿತಿ ಎದುರಿಸುತ್ತಿರುವ ಹಿನ್ನೆಲೆಯಲ್ಲಿ, ಈ ಮಾಹಿತಿ ತಿಳಿದುಕೊಳ್ಳುವುದು ಅತ್ಯಂತ ಮುಖ್ಯವಾಗಿದೆ.
ಹೆಸರಿನ ಬಗ್ಗೆ ಮುಖ್ಯ ಸೂಚನೆ
ನವಜಾತ ಶಿಶುವಿನ ಜನನ ಪ್ರಮಾಣಪತ್ರದಲ್ಲಿ ಇನಿಷಿಯಲ್ (Initials) ಬಳಸಲು ಅವಕಾಶ ಇಲ್ಲ. ಮಗುವಿನ ಪೂರ್ಣ ಹೆಸರು (Expanded Name) ಇರಬೇಕು. ಒಂದು ವೇಳೆ ಇನಿಷಿಯಲ್ ಇದ್ದರೆ, ಮೊದಲು ಜನನ ಪ್ರಮಾಣಪತ್ರವನ್ನು ತಿದ್ದುಪಡಿ ಮಾಡಿಸಿ ಬಳಿಕ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು
ಮಗುವಿನ ಪಾಸ್‌ಪೋರ್ಟ್‌ಗೆ ಪಾಲಕರು ಇಬ್ಬರೂ ಸೇರಿ ಅರ್ಜಿ ಸಲ್ಲಿಸಬೇಕು. ಈ ಕೆಳಗಿನ ದಾಖಲೆಗಳು ಕಡ್ಡಾಯ:
• MHA (Ministry of Home Affairs) ಜನನ ನೋಂದಣಿ ಫಾರ್ಮ್ ಬೇಕಾಗುವುದು
• ಯುಎಇ ಆರೋಗ್ಯ ಸಚಿವಾಲಯ ನೀಡಿದ ಜನನ ಪ್ರಮಾಣಪತ್ರ ಪಡೆಯಬೇಕು
• ಪ್ರಮಾಣಪತ್ರ ಅರೇಬಿಕ್‌ನಲ್ಲಿ ಇದ್ದರೆ, ಇಂಗ್ಲಿಷ್ ಗೆ ಅನುವಾದ ಮಾಡಬೇಕಾಗುತ್ತದೆ
• QR ಕೋಡ್ ಇಲ್ಲದ ಪ್ರಮಾಣಪತ್ರಕ್ಕೆ MoFA ಅಟೆಸ್ಟೇಶನ್ ಮಾಡಬೇಕು
• ಮದುವೆ ಪ್ರಮಾಣಪತ್ರ (ಪಾಸ್‌ಪೋರ್ಟ್‌ನಲ್ಲಿ ಪತ್ನಿ/ಪತಿಯ ಹೆಸರು ಇಲ್ಲದಿದ್ದರೆ)
• ಪಾಲಕರ ಪಾಸ್‌ಪೋರ್ಟ್ ಪ್ರತಿಗಳು ಲಗತ್ತಿಸಬೇಕಾಗುವುದು
• ಪಾಲಕರ ವೀಸಾ ಪ್ರತಿಗಳು ಲಗತ್ತಿಸಬೇಕಾಗುವುದು.
ಒಂದು ವರ್ಷಕ್ಕಿಂತ ಹೆಚ್ಚು ವಯಸ್ಸಿನ ಮಗು ಇದ್ದರೆ
ಮಗುವಿನ ವಯಸ್ಸು ಒಂದು ವರ್ಷಕ್ಕಿಂತ ಹೆಚ್ಚು ಇದ್ದರೆ, ಜನನ ನೋಂದಣಿಯಲ್ಲಿ ತಡವಾದ ಕಾರಣವನ್ನು ವಿವರಿಸುವ ಪತ್ರವನ್ನು ಇಬ್ಬರೂ ಪಾಲಕರು ಸಹಿ ಮಾಡಿ ಸಲ್ಲಿಸಬೇಕು. ಈ ಅರ್ಜಿಗೆ ಪೂರ್ವಾನುಮತಿ ಅಗತ್ಯವಾಗುತ್ತದೆ.
ವಿಶೇಷ ಸೂಚನೆ
ಪಾಲಕರಲ್ಲಿ ಯಾರಾದರೂ ವಿದೇಶಿ ನಾಗರಿಕರಾಗಿದ್ದರೆ, ಮಗುವಿಗೆ ಆ ದೇಶದ ನಾಗರಿಕತೆ ನೀಡಿಲ್ಲ ಎಂಬುದಾಗಿ ಸಂಬಂಧಿತ ರಾಯಭಾರ ಕಚೇರಿಯಿಂದ ಪ್ರಮಾಣಪತ್ರ ತರಬೇಕಾಗುತ್ತದೆ.
ಪಾಲಕರು ಗಮನಿಸಬೇಕಾದ ವಿಷಯ
ಸಣ್ಣ ತಪ್ಪುಗಳು ಅಂದರೆ ವಿಶೇಷವಾಗಿ ಹೆಸರಿನ ವ್ಯತ್ಯಾಸ, ದಾಖಲೆಗಳ ಕೊರತೆ, ಅಥವಾ ತಡವಾದ ಅರ್ಜಿ ಇದ್ದಲ್ಲಿ ಪಾಸ್‌ಪೋರ್ಟ್ ಪ್ರಕ್ರಿಯೆಯನ್ನು ವಿಳಂಬಗೊಳಿಸಬಹುದು. ಆದ್ದರಿಂದ ಅರ್ಜಿ ಸಲ್ಲಿಸುವ ಮೊದಲು ಎಲ್ಲಾ ಮಾಹಿತಿಯನ್ನು ಸರಿಯಾಗಿ ಪರಿಶೀಲಿಸುವುದು ಅಗತ್ಯ. ಯುಎಇಯಲ್ಲಿ ವಾಸಿಸುವ ಭಾರತೀಯ ಪಾಲಕರು ಈ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು ಕ್ರಮ ಕೈಗೊಂಡರೆ, ಮಗುವಿನ ಪಾಸ್‌ಪೋರ್ಟ್ ಪ್ರಕ್ರಿಯೆ ಸುಗಮವಾಗಲಿದೆ.





