20 June 2026 |

ವಿದೇಶ ಉದ್ಯೋಗಕ್ಕೆ ಹೋಗುವವರೇ ಗಮನಿಸಿ: ಏಜೆಂಟ್‌ಗೆ ಹಣ ಕೊಡುವ ಮುನ್ನ ಹೀಗೆ ಪರಿಶೀಲಿಸಿ

  • 19 Jun 2026 01:17:00 AM

ಇತ್ತೀಚಿನ ದಿನಗಳಲ್ಲಿ ವಿದೇಶ ಉದ್ಯೋಗದ ಆಮಿಷವೊಡ್ಡಿ ಹಲವರಿಂದ ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆಗಳು ವರದಿಯಾಗುತ್ತಿವೆ. ವಿದೇಶದಲ್ಲಿ ಉದ್ಯೋಗ ಪಡೆಯಲು ಪ್ರಯತ್ನಿಸುವ ಅಭ್ಯರ್ಥಿಗಳು ಹಾಗೂ ಅವರ ಕುಟುಂಬಗಳು ಈ ವಿಚಾರದಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.

 

ಭಾರತದಿಂದ ವಿದೇಶಗಳಿಗೆ ಉದ್ಯೋಗಕ್ಕಾಗಿ ಅಭ್ಯರ್ಥಿಗಳನ್ನು ಕಳುಹಿಸುವ ಎಲ್ಲ Recruitment Agent (RA) ಗಳು ಭಾರತ ಸರ್ಕಾರದ Ministry of External Affairs (MEA) ಅಡಿಯಲ್ಲಿ ನೋಂದಣಿ ಹೊಂದಿರಬೇಕು. ನೋಂದಾಯಿತ ಏಜೆಂಟ್‌ಗಳಿಗೆ ಮಾತ್ರ ಕಾನೂನುಬದ್ಧವಾಗಿ ನೇಮಕಾತಿ ಪ್ರಕ್ರಿಯೆ ನಡೆಸುವ ಅಧಿಕಾರವಿರುತ್ತದೆ.

 

ಮಂಗಳೂರು ಸೇರಿದಂತೆ ಕರಾವಳಿ ಭಾಗದಲ್ಲಿಯೂ MEA ಅಡಿಯಲ್ಲಿ ನೋಂದಾಯಿತ ಹಲವಾರು Recruitment Agent ಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಕೆಲವರು ನೋಂದಣಿ ಇಲ್ಲದ ವ್ಯಕ್ತಿಗಳು ಅಥವಾ ನಕಲಿ ಏಜೆಂಟ್‌ಗಳ ಮಾತು ನಂಬಿ ಹಣ ಪಾವತಿಸಿ ಮೋಸ ಹೋಗುತ್ತಿರುವ ಪ್ರಕರಣಗಳು ಕಂಡುಬರುತ್ತಿವೆ.

 

ಒಮ್ಮೆ ಹಣ ಪಾವತಿಸಿ ಮೋಸವಾಗಿರುವುದು ತಿಳಿದ ನಂತರ ಪೊಲೀಸ್ ಠಾಣೆಗೆ ದೂರು ನೀಡಿದರೂ, ಕಟ್ಟಿದ ಹಣವನ್ನು ಸಂಪೂರ್ಣವಾಗಿ ಮರಳಿ ಪಡೆಯುವುದು ಅನೇಕ ಸಂದರ್ಭಗಳಲ್ಲಿ ಕಷ್ಟಕರವಾಗುತ್ತದೆ. ಆದ್ದರಿಂದ ಯಾವುದೇ ಹಣ ಪಾವತಿಸುವ ಮೊದಲು ಹಾಗೂ ವೈಯಕ್ತಿಕ ದಾಖಲೆಗಳನ್ನು ಹಂಚಿಕೊಳ್ಳುವ ಮೊದಲು ಏಜೆಂಟ್‌ನ ವಿಶ್ವಾಸಾರ್ಹತೆಯನ್ನು ಪರಿಶೀಲಿಸುವುದು ಅತ್ಯಂತ ಮುಖ್ಯ.

 

MEA ಯ eMigrate ಪೋರ್ಟಲ್ https://emigrate.gov.in ನಲ್ಲಿ ನೋಂದಾಯಿತ Recruitment Agent ಗಳ ಪಟ್ಟಿ ಲಭ್ಯವಿದೆ. ಅಭ್ಯರ್ಥಿಗಳು ಏಜೆಂಟ್‌ನ Recruitment Agent (RA) License Number ಅನ್ನು ಪಡೆದು ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದು.

 

ವಿದೇಶ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸುವವರು ಯಾವುದೇ ಹಣ ಪಾವತಿಸುವ ಮುನ್ನ ಮತ್ತು ದಾಖಲೆಗಳನ್ನು ನೀಡುವ ಮುನ್ನ ಸಮರ್ಪಕ ಪರಿಶೀಲನೆ ನಡೆಸುವುದು ಒಳಿತು. ಎಚ್ಚರಿಕೆಯಿಂದಿರಿ, ಮೊದಲು ಪರಿಶೀಲಿಸಿ, ಸುರಕ್ಷಿತವಾಗಿ ವಿದೇಶ ಪ್ರಯಾಣ ಮಾಡಿ.

 

ಈ ಮಾಹಿತಿಯನ್ನು ವಿದೇಶದಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ತಪ್ಪದೇ ಹಂಚಿಕೊಳ್ಳಿ.