22 July 2026 |

7ನೇ ತಾರೀಕಿನೊಳಗೆ ವೇತನ ನೀಡುವುದು ಕಡ್ಡಾಯವೇ? ತಿಳಿಯಿರಿ ಹೊಸ ವೇತನ ಸಂಹಿತೆಯ ನಿಯಮಗಳು

  • 21 Jul 2026 11:54:17 AM

ನವದೆಹಲಿ: ಉದ್ಯೋಗಿಗಳ ವೇತನ ಪಾವತಿಗೆ ಸಂಬಂಧಿಸಿದ Code on Wages, 2019 (ವೇತನ ಸಂಹಿತೆ)ಹಲವು ಮಹತ್ವದ ನಿಯಮಗಳನ್ನು ಒಳಗೊಂಡಿದೆ. ಈ ಸಂಹಿತೆಯ ಪ್ರಕಾರ ಮಾಸಿಕ ವೇತನ ಪಡೆಯುವ ಉದ್ಯೋಗಿಗಳಿಗೆ ನಿಗದಿತ ಅವಧಿಯೊಳಗೆ ಸಂಬಳ ಪಾವತಿಸುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

 

ವೇತನ ಸಂಹಿತೆಯ ನಿಯಮಗಳ ಪ್ರಕಾರ, ಉದ್ಯೋಗಿಗಳಿಗೆ ಅನಗತ್ಯವಾಗಿ ವೇತನ ವಿಳಂಬ ಮಾಡಬಾರದು. ಮಾಸಿಕ ವೇತನ ಪಡೆಯುವ ಉದ್ಯೋಗಿಗಳಿಗೆ ಪ್ರತಿ ತಿಂಗಳ ವೇತನವನ್ನು ಆ ತಿಂಗಳ ಅಂತ್ಯದಿಂದ ಏಳು ದಿನಗಳೊಳಗೆ, ಅಂದರೆ ಮುಂದಿನ ತಿಂಗಳ 7ನೇ ತಾರೀಕಿನೊಳಗೆ ಪಾವತಿಸಬೇಕು ಎಂದು ಸಂಹಿತೆಯಲ್ಲಿ ಉಲ್ಲೇಖಿಸಲಾಗಿದೆ. ನಿಯಮ ಉಲ್ಲಂಘನೆಯಾದರೆ ಉದ್ಯೋಗಿಗಳು ಕಾನೂನುಬದ್ಧ ಪರಿಹಾರಕ್ಕಾಗಿ ಸಂಬಂಧಿತ ಅಧಿಕಾರಿಗಳನ್ನು ಸಂಪರ್ಕಿಸಬಹುದು.

 

ವೇತನ ಪಾವತಿಗೆ ಸ್ಪಷ್ಟ ಕಾಲಮಿತಿಯನ್ನು ನಿಗದಿಪಡಿಸಿರುವ ಈ ಸಂಹಿತೆಯ ಉದ್ದೇಶ, ಉದ್ಯೋಗಿಗಳು ಸಮಯಕ್ಕೆ ಸರಿಯಾಗಿ ತಮ್ಮ ಸಂಬಳವನ್ನು ಪಡೆಯುವಂತೆ ಮಾಡುವುದು. ವೇತನ ವಿಳಂಬವಾದರೆ ಅಥವಾ ಅನ್ಯಾಯವಾಗಿ ಕಡಿತಗೊಳಿಸಿದರೆ ಸಂಬಂಧಿತ ಅಧಿಕಾರಿಗಳಿಗೆ ದೂರು ಸಲ್ಲಿಸುವ ಅವಕಾಶವೂ ಇದೆ.

 

ಸಂಹಿತೆಯ ಪ್ರಕಾರ, ಯಾವುದೇ ಸೂಕ್ತ ಕಾರಣವಿಲ್ಲದೆ ಸಂಬಳವನ್ನು ತಡಗೊಳಿಸುವುದು ಅಥವಾ ಉದ್ಯೋಗಿಗೆ ಪೂರ್ವ ಮಾಹಿತಿ ನೀಡದೆ ವೇತನದಲ್ಲಿ ಕಡಿತ ಮಾಡುವುದು ಕಾನೂನು ಉಲ್ಲಂಘನೆಯಾಗಬಹುದು. ಇಂತಹ ಸಂದರ್ಭಗಳಲ್ಲಿ ಕಾರ್ಮಿಕ ಇಲಾಖೆಯ ಇನ್‌ಸ್ಪೆಕ್ಟರ್ ಕಮ್ ಫೆಸಿಲಿಟೇಟರ್ (ICF) ಅವರ ನೆರವು ಪಡೆಯಬಹುದು.

 

ಉದಾಹರಣೆಗೆ, ಜುಲೈ ತಿಂಗಳ ವೇತನವನ್ನು ಆಗಸ್ಟ್ 7ರೊಳಗೆ ಪಾವತಿಸಬೇಕು. ಅದೇ ರೀತಿ, ಉದ್ಯೋಗಿಯೊಬ್ಬರು ರಾಜೀನಾಮೆ ನೀಡಿದಾಗ, ವಜಾಗೊಂಡಾಗ ಅಥವಾ ಸೇವೆಯಿಂದ ಬಿಡುಗಡೆಗೊಂಡಾಗ, ಅವರಿಗೆ ಪಾವತಿಸಬೇಕಿರುವ ಬಾಕಿ ವೇತನವನ್ನು ಎರಡು ದಿನಗಳೊಳಗೆ ಸಂಪೂರ್ಣವಾಗಿ ನೀಡಬೇಕು ಎಂದು ಸಂಹಿತೆ ತಿಳಿಸುತ್ತದೆ.

 

ಈ ನಿಯಮಗಳು ಕೇವಲ ಮಾಸಿಕ ವೇತನ ಪಡೆಯುವವರಿಗೆ ಮಾತ್ರ ಸೀಮಿತವಾಗಿಲ್ಲ. ದೈನಂದಿನ ಕೂಲಿ ಕಾರ್ಮಿಕರಿಗೆ ಕೆಲಸದ ಶಿಫ್ಟ್ ಮುಗಿದ ತಕ್ಷಣವೇ ಕೂಲಿ ಪಾವತಿಸಬೇಕು. ವಾರದ ಆಧಾರದಲ್ಲಿ ಕೆಲಸ ಮಾಡುವವರಿಗೆ ವಾರದ ರಜೆಯ ಮೊದಲು ವೇತನ ಪಾವತಿಸಬೇಕು ಎಂದು ಸಂಹಿತೆಯಲ್ಲಿ ಉಲ್ಲೇಖಿಸಲಾಗಿದೆ.

 

ಹದಿನೈದು ದಿನಗಳ ವೇತನ ಚಕ್ರದಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ, ಆ ಅವಧಿ ಪೂರ್ಣಗೊಂಡ ನಂತರ ಎರಡು ದಿನಗಳೊಳಗೆ ಸಂಬಳ ಪಾವತಿಸಬೇಕು. ವೇತನ ಪಾವತಿಯಲ್ಲಿ ಯಾವುದೇ ಸಮಸ್ಯೆ ಎದುರಾದರೆ ಉದ್ಯೋಗಿಗಳು ಐಸಿಎಫ್ ಅಧಿಕಾರಿಗಳ ನೆರವು ಪಡೆಯಬಹುದು. ನ್ಯಾಯಮಂಡಳಿಗೆ ಹೋಗುವ ಮುನ್ನವೇ ಹಲವು ವಿವಾದಗಳನ್ನು ಬಗೆಹರಿಸಲು ಈ ಅಧಿಕಾರಿಗಳು ಮಾರ್ಗದರ್ಶನ ನೀಡುತ್ತಾರೆ.

 

ವೇತನ ಸಂಹಿತೆಯ ಮತ್ತೊಂದು ಪ್ರಮುಖ ಅಂಶವೆಂದರೆ, ವೇತನ ಪಾವತಿಸುವ ಸಂದರ್ಭದಲ್ಲಿ ಉದ್ಯೋಗಿಗಳಿಗೆ ಪೇಸ್ಲಿಪ್ (Payslip) ನೀಡಬೇಕು. ಇದರಿಂದ ವೇತನದಲ್ಲಿ ಆಗಿರುವ ಕಡಿತ, ಭತ್ಯೆಗಳು ಹಾಗೂ ಇತರೆ ವಿವರಗಳನ್ನು ಉದ್ಯೋಗಿಗಳು ಸುಲಭವಾಗಿ ಪರಿಶೀಲಿಸಬಹುದು.

 

ವೇತನ ಬಾಕಿ, ತಡ ಪಾವತಿ ಅಥವಾ ಇತರೆ ವೇತನ ಸಂಬಂಧಿತ ಸಮಸ್ಯೆಗಳ ಕುರಿತು ಉದ್ಯೋಗಿಗಳು ಮೂರು ವರ್ಷದೊಳಗೆ ಅಧಿಕೃತ ದೂರು ದಾಖಲಿಸಲು ಅವಕಾಶವಿದ್ದು, ತಮ್ಮ ಹಕ್ಕುಗಳ ರಕ್ಷಣೆಗೆ ಕಾನೂನುಬದ್ಧ ನೆರವು ಪಡೆಯಬಹುದು.