ಸುಬ್ರಹ್ಮಣ್ಯ: ನಾಗದೋಷ ಪರಿಹಾರಕ್ಕಾಗಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆಗಮಿಸುವ ಭಕ್ತರು ಯಾವುದೇ ಮಧ್ಯವರ್ತಿಗಳ ಮಾತಿಗೆ ಮರುಳಾಗಬಾರದು ಎಂದು ದೇವಸ್ಥಾನದ ಆಡಳಿತ ಮಂಡಳಿ ಮಹತ್ವದ ಎಚ್ಚರಿಕೆ ನೀಡಿದೆ.
ಸರ್ಪ ಸಂಸ್ಕಾರ, ನಾಗ ಪ್ರತಿಷ್ಠೆ, ಆಶ್ಲೇಷ ಬಲಿ ಸೇರಿದಂತೆ ಪ್ರಮುಖ ಧಾರ್ಮಿಕ ಸೇವೆಗಳನ್ನು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆವರಣದಲ್ಲೇ ನೆರವೇರಿಸಿದಾಗ ಮಾತ್ರ ಶಾಸ್ತ್ರೋಕ್ತ ಫಲ ದೊರೆಯುತ್ತದೆ ಎಂದು ದೇವಳ ಸ್ಪಷ್ಟಪಡಿಸಿದೆ.
ಇತ್ತೀಚೆಗೆ ಕೆಲವು ಮಧ್ಯವರ್ತಿಗಳು ಭಕ್ತರನ್ನು ದಿಕ್ಕು ತಪ್ಪಿಸಿ ಖಾಸಗಿ ವಸತಿ ಗೃಹಗಳು, ಮಠಗಳು ಹಾಗೂ ಪುರೋಹಿತರ ಮನೆಗಳಲ್ಲಿ ಇಂತಹ ಸೇವೆಗಳನ್ನು ಮಾಡಿಸುತ್ತಿರುವ ಬಗ್ಗೆ ಮಾಹಿತಿ ಲಭಿಸಿದೆ. ಇಂತಹ ಸ್ಥಳಗಳಲ್ಲಿ ನಡೆಸುವ ಪೂಜೆ-ಸೇವೆಗಳಿಗೆ ದೇವಸ್ಥಾನದ ಯಾವುದೇ ಮಾನ್ಯತೆ ಇಲ್ಲ. ಅಲ್ಲದೆ, ಅವುಗಳಿಂದ ದೋಷ ಪರಿಹಾರ ಅಥವಾ ಧಾರ್ಮಿಕ ಫಲ ಸಿಗುವುದಿಲ್ಲ ಎಂದು ಆಡಳಿತ ಮಂಡಳಿ ತಿಳಿಸಿದೆ.
ದೇವಸ್ಥಾನವು ಯಾವುದೇ ಮಧ್ಯವರ್ತಿಗಳನ್ನು ನೇಮಿಸಿಲ್ಲ ಎಂದು ಸ್ಪಷ್ಟಪಡಿಸಿರುವ ಆಡಳಿತ ಮಂಡಳಿ, ನಾಗದೋಷ ಪರಿಹಾರದ ಹೆಸರಿನಲ್ಲಿ ಹೆಚ್ಚಿನ ಹಣ ವಸೂಲಿ ಮಾಡುವವರ ಬಗ್ಗೆ ಎಚ್ಚರಿಕೆ ವಹಿಸುವಂತೆ ಭಕ್ತರಿಗೆ ಮನವಿ ಮಾಡಿದೆ.
ಸರ್ಪ ಸಂಸ್ಕಾರ ಸೇರಿದಂತೆ ದೇವಸ್ಥಾನದ ಎಲ್ಲ ಸೇವೆಗಳಿಗೂ ಅಧಿಕೃತ ವೆಬ್‌ಸೈಟ್ ಮೂಲಕವೇ ಮುಂಗಡ ಕಾಯ್ದಿರಿಸುವ ವ್ಯವಸ್ಥೆ ಲಭ್ಯವಿದೆ. ಆದ್ದರಿಂದ ಭಕ್ತರು ಮಧ್ಯವರ್ತಿಗಳ ಮಾತು ನಂಬದೆ, ದೇವಸ್ಥಾನದ ಅಧಿಕೃತ ವ್ಯವಸ್ಥೆಯ ಮೂಲಕವೇ ಸೇವೆಗಳನ್ನು ಬುಕ್ ಮಾಡಿ ಧಾರ್ಮಿಕ ವಿಧಿಗಳನ್ನು ನೆರವೇರಿಸುವಂತೆ ದೇವಳ ಆಡಳಿತ ಮಂಡಳಿ ವಿನಂತಿಸಿದೆ.





