25 July 2025 | Join group

ಉತ್ತಮ ರೀತಿಯ ಜಿಗಿತ ಕಂಡ ಕೊಬ್ಬರಿ ಎಣ್ಣೆ ಬೆಲೆ: ಮತ್ತಷ್ಟು ಏರಿಕೆಯಾಗುವ ಸಾಧ್ಯತೆ

  • 22 Jun 2025 02:18:31 PM

ಬಂಟ್ವಾಳ: ಕಳೆದ ವರ್ಷ ತೆಂಗಿನಕಾಯಿ ದರ ನೆಲಕಚ್ಚಿದ್ದ ಕಾರಣ ಅಂದಿನ ದರ 200ರೂ. ವರೆಗೆ ಇಳಿಕೆಯಾಗಿತ್ತು. ಕ್ರಮೇಣ ದರ ಏರಿಕೆಯಾಗಿ ರೂ. 300 ರವರೆಗೆ ತಲುಪಿತ್ತು. ತಿಂಗಳಿಂದ ಈಚೆಗೆ ದರ ಹೆಚ್ಚುತ್ತಲೇ ಇದ್ದು, ಪ್ರಸ್ತುತ ಲೀಟರಿಗೆ ಬಿಡಿ ಎಣ್ಣೆಗೆ 380 ರೂ. ಇದ್ದು, ಪ್ಯೂರ್ ಪ್ಯಾಕೆಟ್ 390 ರೂ. ರಿಂದ 420 ರೂ. ರವರೆಗೆ ಆಗಿದೆ.

 

ಇನ್ನೂ ಕೇರಳ ಕೊಬ್ಬರಿ ಎಣ್ಣೆ 420 ರೂ. ಗೆ ಏರಿಕೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ದುಪ್ಪಟ್ಟು ಬೆಲೆಯಾಗಿದೆ. ಕರಾವಳಿಯಲ್ಲಿ ಬೆಳೆಯುವ ತೆಂಗಿಕಾಯಿಯಲ್ಲಿ ಎಣ್ಣೆ ಪ್ರಮಾಣ ಜಾಸ್ತಿ. ಆದರೆ ಇತೀಚಿನ ದಿನಗಳಲ್ಲಿ ಸರಿಯಾಗಿ ಉತ್ತಮ ರೀತಿಯ ಕೊಬ್ಬರಿ ಸಿಗುತ್ತಿಲ್ಲ ಎಂದು ವ್ಯಾಪಾರಿಗಳು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

 

ಒಂದು ಲೀಟರಿಗೆ ತೆಂಗಿನ ಎಣ್ಣೆ ಪಡೆಯಲು ಸುಮಾರು ಒಂದು ಮುಕ್ಕಾಲು ಕೆ.ಜಿ ಕೊಬ್ಬರಿ ಬೇಕು. ಪ್ರತಿ ಲೀಟರ್ ತೆಂಗಿನಎಣ್ಣೆಯನ್ನು ಕನಿಷ್ಠ ದರ 390 ರೂ. ಕ್ಕಿಂತ ಕಡಿಮೆ ದರಕ್ಕೆ ಮಾರಾಟ ಮಾಡಿದರೆ ನಷ್ಟವಾಗುತ್ತದೆ ಎನ್ನುತ್ತಾರೆ ಸ್ಥಳೀಯ ವ್ಯಾಪಾರಿಗಳು.

 

ಸದ್ಯಕ್ಕೆ ಪ್ರತಿ ಕೆ.ಜಿ ಗೆ 240 ರೂ. ಕೊಡುತ್ತೇವೆ ಎಂದರೂ ಕೊಬ್ಬರಿ ಕೊಡುವವರು ಇಲ್ಲದಾಗಿದೆಯಂತೆ. ಪ್ರಸ್ತುತ ಕೊಬ್ಬರಿ ಎಣ್ಣೆ ದರ ಮಂಗಳೂರಿನಲ್ಲಿ ರೂ. 400, ಕೇರಳ 420 ರೂ, ಮತ್ತು ತಮಿಳುನಾಡು ರೂ. 390 ರಷ್ಟಿದೆ. ಕೇರಳದ ಓಣಂ ಹಬ್ಬದ ಸಂದರ್ಭದಲ್ಲಿ ಮತ್ತಷ್ಟು ಏರಿಕೆಯಾಗಿ ರೂ 500 ರಷ್ಟು ತಲುಪುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.