ಬೆಂಗಳೂರು: ಬಹಳ ವರ್ಷಗಳಿಂದ ಹೆಸರು ಕೂಗಿ ಹಾಜರಾತಿ ಪಡೆಯುವ ಪದ್ಧತಿ ಎಲ್ಲಾ ಶಾಲೆಗಳಲ್ಲಿ ನಡೆದುಕೊಂಡು ಬಂದಿದೆ. ಆದರೆ ರಾಜ್ಯ ಸರಕಾರ ಈಗ ಹೊಸ ಹಾಜರಾತಿ ವ್ಯವಸ್ಥೆಯನ್ನು ಜಾರಿಗೊಳಿಸಲು ನಿರ್ಧರಿಸಿದೆ.
ಇನ್ನು ಮುಂದೆ ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮೊಬೈಲ್ ಆಧಾರಿತ AI ಫೇಶಿಯಲ್ ರೆಕಗ್ನಿಷನ್(Mobile Driven Facial Recognition Attendence System) ನ್ನು ಪ್ರಸಕ್ತ ವರ್ಷದಿಂದಲೇ ಜಾರಿಗೆ ತರಲಿದೆ. ಮುಖ ಚಹರೆ ಗುರುತು ಆಧಾರಿತ ಹಾಜರಾತಿ ಪಡೆಯುವುದರ ಮೂಲಕ ನಿಖರವಾದ ಹಾಜರಾತಿಯನ್ನು ನೋಂದಾಯಿಸಬಹುದು.
ರಾಜ್ಯದಲ್ಲಿರುವ ಒಟ್ಟು 52,686 ಶಾಲೆಗಳಲ್ಲಿ ಆನ್ ಲೈನ್ ಹಾಜರಾತಿ ವ್ಯವಸ್ಥೆ ಬರಲಿದೆ. ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆಯನ್ನು ಕರ್ನಾಟಕ ಸ್ಟೇಟ್ ಡೇಟಾ ಸೆಂಟರ್ (KSDC) ಮೂಲಕ ನಿರ್ವಹಣೆ ಮಾಡಲಾಗುವುದು.
ಪ್ರಸಕ್ತ ವರ್ಷದಿಂದ ಬರಲಿರುವ ಇ-ಹಾಜರಾತಿಯಿಂದ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ದರೂ, ಸರಕಾರದ ಸೌಲಭ್ಯ ಪಡೆಯುವ ಕೆಲ ಶಾಲೆಗಳ ಕೃತ್ಯಕ್ಕೆ ತೆರೆ ಬೀಳಲಿದೆ. 2025-26ನೇ ಶೈಕ್ಷಣಿಕ ಸಾಲಿನಿಂದಲೇ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ.
ಈ ಮೂಲಕ ಬಹಳ ವರ್ಷಗಳಿಂದ ನಡೆದುಕೊಂಡು ಬಂದಿದ್ದ, ಹೆಸರು ಕೂಗಿ ಹಾಜರಾತಿ ಪಡೆಯುವ ಪದ್ದತಿಗೆ ಗುಡ್ ಬೈ ಹೇಳುವ ಸಮಯ ಬಂದಿದೆ. ಶಿಕ್ಷಕರು ವಿದ್ಯಾರ್ಥಿಗಳ ಫೋಟೋ ಕ್ಲಿಕ್ ಮಾಡುವ ಮೂಲಕ ಹಾಜರಾತಿ ದಾಖಲಿಸಿಕೊಳ್ಳಲಿದ್ದಾರೆ.