ಮಂಗಳೂರು: ನಗರಗಳಲ್ಲಿ ಕಟ್ಟಲಾಗುವ ಎಲ್ಲಾ ಕಮರ್ಷಿಯಲ್ ಕಟ್ಟಡಗಳು ‘ರೇರಾ ಕಾಯ್ದೆಯ’ ನಿಯಮಗಳ ಮೂಲಕವೇ ಕಟ್ಟಬೇಕಾಗುತ್ತದೆ. ಆದರೆ ಇದೀಗ ಭೂ ಪ್ರಾಧಿಕಾರ ಈ ನಿಯಮಗಳನ್ನು ಗ್ರಾಮಾಂತರ ಪ್ರದೇಶಗಳಿಗೂ ವಿಸ್ತರಿಸಿದೆ.
ಈ ಮೂಲಕ ಜೂನ್ 3 ರಂದು ಸರಕಾರ ಅಧಿಸೂಚನೆ ಹೊರಡಿಸಿದೆ. ‘ಕರ್ನಾಟಕ ಗ್ರಾಮ ಸ್ವರಾಜ್ ಹಾಗೂ ಪಂಚಾಯತ್ ರಾಜ್ ಅಧಿನಿಯಮ’ ಕ್ಕೆ ಉಪವಿಧಿ ಯನ್ನು ರಚಿಸಲಾಗಿದೆ. ಕೆಲವೇ ದಿನಗಳಲ್ಲಿ ಈ ಸಂಬಂಧ ನಿಯಮಾವಳಿಯೂ ರೂಪುಗೊಳ್ಳಲಿದೆ ಎಂದು ತಿಳಿದುಬಂದಿದೆ.
ಕಾನೂನು ಜಾರಿಗೆ ಬಂದ ನಂತರ ಈ ಹಿಂದೆ ಗ್ರಾಮೀಣ ಭಾಗದ ಭೂ ಪರಿವರ್ತಿತ ಜಮೀನುಗಳಲ್ಲಿ ಕಟ್ಟದ ನಕ್ಷೆಗೆ ಅನುಮೋದನೆ ನೀಡುವ ಪಂಚಾಯತ್ ನ ಅಧಿಕಾರ ರೇರಾ ನಿಗಮಕ್ಕೆ ವರ್ಗಾಯಿಸಲಾಗುತ್ತದೆ.
ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ(ರೇರಾ) ದ ಮೂಲಕ ಸಲ್ಲಿಸುವ ನಕ್ಷೆ ಬೆಂಗಳೂರು ಕಚೇರಿಯಿಂದ ಅನುಮೋದನೆ ಬರಬೇಕಾದುದರಿಂದ ಹೆಚ್ಚಿನ ಸಮಯ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಸಾರ್ವಜನಿಕರು ಕಳವಳ ವ್ಯಕ್ತಪಡಿಸಿದ್ದಾರೆ.