ಬಿಸಿಲಿನ ತಾಪವನ್ನು ಕಡಿಮೆ ಮಾಡುವಲ್ಲಿ ಇಡೀ ವಿಶ್ವವೇ ವಿಫಲವಾಗುತ್ತಿದೆ. ವರ್ಷದಿಂದ ವರ್ಷಕ್ಕೆ ತಾಪಮಾನ ಹೆಚ್ಚುತ್ತಲೇ ಇದೆ, ಆದ್ದರಿಂದ ನಾವು ನಮ್ಮ ದೇಹವನ್ನು ಸರಿಯಾಗಿ ಸಮತೋಲನ ಮಾಡದೇ ಹೋದರೆ ನಮ್ಮ ದೇಹ ಈ ಬಿಸಿಲಿನ ತಾಪದಿಂದ ಬಹಳಷ್ಟು ಸಮಸ್ಯೆಗಳನ್ನು ಎದುರಿಸಲಿದೆ. ಕರ್ನಾಟಕದ ಜನ ಈಗಾಗಲೇ ಬಿಸಿಲ ತಾಪದಿಂದ ತತ್ತರಿಸುತ್ತಿದ್ದಾರೆ. ಈ ವರ್ಷ ಕಳೆದ ವರ್ಷಕ್ಕಿಂತ ಜಾಸ್ತಿ ಬಿಸಿಲು ಬರುವ ಬಗ್ಗೆ ಹವಾಮಾನ ತಜ್ಞರು ಭವಿಷ್ಯ ನುಡಿದಿದ್ದಾರೆ. ಆದ್ದರಿಂದ ಬನ್ನಿ ನೋಡೋಣ ಈ ಉರಿ ಬಿಸಿಲಿನಿಂದ ಸಮಾಧಾನ ಪಡೆಯಬಹುದಾದ ವಿಧಾನ;
ನಿರಂತರ ನೀರು ಕುಡಿಯಿರಿ ಮತ್ತು ಹೆಚ್ಚಾಗಿ ದ್ರವ್ಯ ಆಹಾರ ಸೇವನೆ ಮಾಡಿ
ಹೌದು, ನಾವು ಬಾಯಾರಿಕೆಯಾದಾಗ ಮಾತ್ರ ನೀರನ್ನು ಹುಡುಕಿಕೊಂಡು ಹೋಗುತ್ತೇವೆ. ಬಾಯಾರಿಕೆ ನೀಗಿದ ನಂತರ ನಮಗೆ ನೀರು ಕುಡಿಯುವ ಯೋಚನೆಯೇ ಬರೋದಿಲ್ಲ. ಆದರೆ ಬೇಸಿಗೆ ಕಾಲದಲ್ಲಿ ನಿರಂತರವಾಗಿ ನೀರು ಕುಡಿಯುತ್ತಲೇ ಇರಬೇಕು. ದೇಹ ಬೆವರಿನ ರೂಪದಲ್ಲಿ ನೀರಿನ ಅಂಶವನ್ನು ಹೊರ ಹಾಕುತ್ತಲೇ ಇರುತ್ತದೆ. ಒಂದು ವೇಳೆ ನಾವು ನೀರಿನ ಸೇವನೆಯ ಪ್ರಮಾಣ ಕಡಿಮೆ ಮಾಡಿದರೆ ನೀರಿನ ಅಂಶ ಬೆವರಿನ ಮೂಲಕ ಹೋಗಿ ದೇಹವನ್ನು ಒಣಗಿಸುತ್ತದೆ ಮತ್ತು ಇದರಿಂದ ಹಲವಾರು ಆರೋಗ್ಯದ ಸಮಸ್ಯೆ ಎದುರಾಗುತ್ತದೆ. ಆದ್ದರಿಂದ ನಿಮ್ಮ ದೇಹವನ್ನು ಅರೋಗ್ಯ ಮತ್ತು ಬಿಸಿಲಿನ ಸಂದರ್ಭದಲ್ಲಿ ತಂಪಾಗಿ ಇರಿಸಲು ನೀರು ಅಥವಾ ದ್ರವ್ಯ ಪದಾರ್ಥಗಳನ್ನೇ ಅತಿಯಾಗಿ ಸೇವಿಸಿ.
ಹಣ್ಣು ಹಂಪನಗಳೇ ನಿಮ್ಮ ಮೊದಲ ಆದ್ಯತೆಯಾಗಿರಲಿ
ಹಣ್ಣು ಹಂಪನಗಳನ್ನು ಬೇಸಿಗೆ ಸಮಯದಲ್ಲಿ ಅತಿಯಾಗಿ ಸೇವನೆ ಮಾಡುವುದರಿಂದ ದೇಹದಲ್ಲಿ ನೀರಿನ ಅಂಶ ಸಮತೋಲನಗೊಳ್ಳುತ್ತದೆ. ನೀರಿನ ಅಂಶ ಜಾಸ್ತಿ ಇರುವ ಹಣ್ಣುಗಳಾದ ಕಲ್ಲಂಗಡಿ, ಪೈನಾಪಲ್ ಹಣ್ಣು, ಆರೆಂಜ್, ದ್ರಾಕ್ಷಿ, ಮಾವಿನ ಹಣ್ಣು ಈ ರೀತಿಯ ಹಣ್ಣುಗಳನ್ನು ಅತಿಯಾಗಿ ಸೇವಿಸಿ. ಊಟದ ನಂತರ ಹಣ್ಣುಗಳನ್ನು ಸೇವನೆ ಮಾಡುವ ಅಭ್ಯಾಸ ಇಟ್ಟುಕೊಂಡರೆ ಉತ್ತಮ.
ನೀವು ಧರಿಸುವ ಬಟ್ಟೆ ತೆಳ್ಳಗಿರಲಿ
ಬೇಸಿಗೆ ಕಾಲದಲ್ಲಿ ನೀವು ಹಾಕುವ ಬಟ್ಟೆ ಬರೆಗಳು ಕೂಡ ದೇಹದ ಉಷ್ಣತೆಯನ್ನು ಏರುಪೆರು ಮಾಡುತ್ತದೆ. ಒಂದು ವೇಳೆ ತುಂಬಾ ದಪ್ಪದ ಬಟ್ಟೆಯನ್ನು ಧರಿಸಿದರೆ ದೇಹದ ಉಷ್ಣತೆ ಹೆಚ್ಚಾಗಿ ನಿಮಗೆ ಉಸಿರುಗಟ್ಟಿದಂತಾಗುತ್ತದೆ. ಸಿಂಥಟಿಕ್ ಬಟ್ಟೆಗಳು ಚರ್ಮದ ಮೇಲೆ ಕಿರಿಕಿರಿ ಮಾಡುತ್ತದೆ ಆದ್ದರಿಂದ ಬೇಸಿಗೆ ಕಾಲದಲ್ಲಿ ಯಾವಾಗಲು ತುಂಬಾ ತೆಳ್ಳಗಿರುವ ಬಟ್ಟೆಗಳನ್ನು ಧರಿಸಿ. ಬಣ್ಣ ಬಣ್ಣದ ಬಟ್ಟೆಗಳನ್ನು ಧರಿಸದೆ, ತಿಳಿ ಬಣ್ಣದ ಬಟ್ಟೆಗಳನ್ನು ಉಪಯೋಗಿಸಿ.
ಆಹಾರದ ಮೇಲೆ ನಿಗಾ ಇರಲಿ
ಕರಿದ ಮಸಾಲೆ ಪದಾರ್ಥಗಳನ್ನು ಸೇವನೆ ಮಾಡುಹುದು ಉತ್ತಮವಲ್ಲ. ಬೇಸಿಗೆ ಕಾಲದಲ್ಲಿ ಅಜೀರ್ಣವಾಗುವಂತಹ ಪದಾರ್ಥಗಳನ್ನು ತಿನ್ನಲೇ ಬಾರದು. ಮಾಂಸ ತಿನ್ನುವುದರಿಂದ ಕೂಡ ದೇಹದ ಉಷ್ಣಾಂಶ ಜಾಸ್ತಿ ಆಗುತ್ತದೆ. ಆದ್ದರಿಂದ ಮಾಂಸದ ಜೊತೆಗೆ ಆದಷ್ಟು ಸಲಾಡ್ ಹೆಚ್ಚಾಗಿ ಸೇವಿಸಿ. ಅದು ನಿಮ್ಮ ಜೀರ್ಣ ಕ್ರಿಯೆಗೆ ಸಹಕಾರಿಯಾಗುತ್ತದೆ. ಬೇಸಿಗೆ ಸಂದರ್ಭದಲ್ಲಿ ಅಜೀರ್ಣಿಯಾಗದಂತೆ ನೋಡಿಕೊಳ್ಳಿ. ಆದ್ದರಿಂದ ಅತಿಯಾದ ಊಟ ಅಥವಾ ತಿನ್ನುವುದನ್ನು ಹಿಡಿತದಲ್ಲಿಡಿ.
ಕೆಫೆನ್ ಅಂಶ ಇರುವ ದ್ರವ್ಯಗಳನ್ನು ದೂರವಿರಿ
ಬೇಸಿಗೆ ಕಾಲದಲ್ಲಿ ಕೆಫೆನ್ ಅಂಶ ಇರುವ ಪದಾರ್ಥಗಳನ್ನು ಸೇವನೆ ಮಾಡುವುದರಿಂದ ದೇಹದ ಉಷ್ಣತೆ ಹೆಚ್ಚಾಗುತ್ತದೆ. ಚಾ- ಕಾಫಿ ಆದಷ್ಟು ಕಡಿಮೆ ಮಾಡಬೇಕು. ಒಂದು ವೇಳೆ ಇವುಗಳನ್ನು ಸೇವನೆ ಮಾಡದೇ ಇದ್ದಾರೆ ಬಹಳ ಉತ್ತಮ. ಇದರ ಜೊತೆ ಸಿಗರೇಟ್ ಮತ್ತು ಮದ್ಯ ಸೇವನೆ ಕೂಡ ಒಳ್ಳೆಯದಲ್ಲ. ದೇಹದ ನೀರಿನ ಅಂಶವನ್ನು ಕಡಿಮೆ ಮಾಡುಹುದು ಅಲ್ಲದೆ ಅಸಿಡಿಟಿಯಂತಹ ಸಮಸ್ಯೆಗಳು ಹೆಚ್ಚಾಗುತ್ತವೆ.
ದೇಹದ ಚರ್ಮದ ಬಗ್ಗೆ ಗಮನವಿರಲಿ
ಬೇಸಿಗೆ ಕಾಲದಲ್ಲಿ ಚರ್ಮ ಉರಿಗೆ ಸಂಬಂಧಪಟ್ಟ ಸಮಸ್ಯೆಗಳು ಪ್ರತಿಯೊಬ್ಬರನ್ನು ಕಾಡುತ್ತದೆ. ಅತಿಯಾದ ಬಿಸಿಲಿಗೆ ಚರ್ಮ ಮೊದಲು ಪರಿಣಾಮಕ್ಕೆ ತುತ್ತಾಗುವ ದೇಹದ ಭಾಗ. ಮುಖದ ಮತ್ತು ದೇಹದ ಸೌಂದರ್ಯಕ್ಕಾಗಿ ಬಹಳಷ್ಟು ಕಾಳಜಿ ವಹಿಸಿದರು ಉರಿ ಬಿಸಿಲಿನ ತಾಪಕ್ಕೆ ಸಿಲುಕಿದರೆ ಚರ್ಮದ ಹೊಳಪು ಕಡಿಮೆಯಾಗುತ್ತದೆ. ಆದ್ದರಿಂದ ಚಳಿಗಾಲ ಕಳೆದು ಬೇಸಿಗೆ ಕಾಲ ಬರುತ್ತಿದ್ದಂತೆ ಸನ್ ಸ್ಕ್ರೀನ್ ಲೋಷನ್ ಕಡ್ಡಾಯವಾಗಿ ಬಳಸಿ. ಇದು ಉರಿ ಬಿಸಿಲಿನ ನೇರ ಪರಿಣಾಮ ಬೀರದಂತೆ ಕಾಪಾಡುತ್ತದೆ.
ಕಣ್ಣುಗಳಿಗೆ ಸರಿಯಾದ ರಕ್ಷಣೆ ಅತ್ಯಗತ್ಯ
ಸೂರ್ಯನ ಅತಿಯಾದ ವಿಕಿರಣಗಳು ಕಣ್ಣಿಗೆ ಬೀಳುವುದರಿಂದ ಕಣ್ಣುಗಳಿಗೆ ಬಹಳ ಹಾನಿ ಉಂಟು ಮಾಡುತ್ತದೆ. ಕಣ್ಣುಗಳನ್ನು ಸರಿಯಾದ ರೀತಿಯಲ್ಲಿ ರಕ್ಷಣೆ ಮಾಡದೇ ಹೋದರೆ ಕಣ್ಣುಗಳ ಪ್ರಭಾವ ಕಡಿಮೆಯಾಗಿ ನೀವು ಆದಷ್ಟು ಬೇಗ ಕಣ್ಣುಗಳ ತೊಂದರೆ ಅನುಭವಿಸುತ್ತೀರಿ. ಆದ್ದರಿಂದ ಮನೆಯಿಂದ ಹೊರಗಡೆ ಹೊರಡುವ ಸಂದರ್ಭದಲ್ಲಿ ಸನ್ ಗ್ಲಾಸ್ ಧರಿಸಿ. ಸನ್ ಗ್ಲಾಸ್ ಧರಿಸುವುದರಿಂದ ಕಣ್ಣುಗಳು ತಂಪಾಗುವುದರ ಜೊತೆಗೆ, ನಿಮ್ಮನ್ನು ಸುಂದರವಾಗಿ ಕಾಣಿಸುತ್ತದೆ.
ಉರಿ ಬಿಸಿಲಿನ ಸಂದರ್ಭದಲ್ಲಿ ವಿಶ್ರಾಂತಿಗೆ ಪ್ರಾಮುಖ್ಯತೆ ನೀಡಿ
ಮದ್ಯಾಹ್ನದ ಉರಿ ಬಿಸಿಲಿಗೆ ನಿಮ್ಮ ಯಾವುದೇ ಕೆಲಸ ಕಾರ್ಯಗಳಿದ್ದರೆ ಅದನ್ನು ಸಾದ್ಯವಾದಷ್ಟು ಬೆಳಿಗ್ಗೆ ಅಥವಾ ಮದ್ಯಾಹ್ನದ ನಂತರಕ್ಕೆ ಪ್ಲಾನ್ ಮಾಡಿ ಮುಗಿಸಿ. ಬಹಳಷ್ಟು ಬಿಸಿಲಿನ ತಾಪ ಹೆಚ್ಚಾಗಿರುವ ಗಲ್ಫ್ ದೇಶಗಳಲ್ಲಿ ಉರಿ ಬಿಸಿಲಿನ ಸಮಯದಲ್ಲಿ ಮದ್ಯಾಹ್ನದ ಬಿಡುವು ನಿಯಮಿತ ಗಂಟೆಗಳಿಂತ ಭಿನ್ನವಾಗಿರುತ್ತದೆ. ಮದ್ಯಾಹ್ನದ ಉರಿ ಬಿಸಿಲಿನ ಹೊತ್ತಿನಲ್ಲಿ ಕೆಲಸಗಾರರಿಗೆ ವಿಶ್ರಾಂತಿ ನೀಡಲಾಗುತ್ತದೆ. ಅದೇ ರೀತಿ ನೀವು ಕೂಡ ನಿಮ್ಮ ಕೆಲಸಗಳನ್ನು ಪ್ಲಾನ್ ಮಾಡಬಹುದು.
ಆದ್ದರಿಂದ, ನಾವು ಹೆಚ್ಚಾಗುತ್ತಿರುವ ಬಿಸಿಲಿನ ತಾಪದಿಂದ ರಕ್ಷಣೆ ಮಾಡಲೇಬೇಕು. ಮುಂಬರುವ ದಿನಗಳಲ್ಲಿ ಸೂರ್ಯನ ಕಿರಣಗಳಿಂದ ಬರುವ ಉರಿ ಬಿಸಿಲಿನ ತಾಪವನ್ನು ತಪ್ಪಿಸಲು ಸಾಧ್ಯವಿಲ್ಲ ಆದರೆ ನಮ್ಮನ್ನು ನಾವು ಉರಿ ಬಿಸಿಲಿನ ಪ್ರಭಾವದಿಂದ ತಪ್ಪಿಸಲೇಬೇಕು. ಮೇಲೆ ಕಾಣಿಸಿದ ಕೆಲ ನಿಯಮಗಳನ್ನು ತಪ್ಪದೆ ಪಾಲಿಸುವಿರಿ ಎಂಬಹುದೇ ನಮ್ಮ ಬಯಕೆ.