ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಕರ್ನಾಟಕ ರಾಜ್ಯದ ಸಮೃದ್ಧ ಇತಿಹಾಸ ಮತ್ತು ಸಂಸ್ಕೃತಿಯ ಕೇಂದ್ರವಾಗಿದೆ. ಇದರ ಕೇಂದ್ರ ಸ್ಥಳವೆಂದರೆ ಮಂಗಳೂರು ನಗರ. ಆದರೆ ಇತ್ತೀಚೆಗಷ್ಟೇ “ದಕ್ಷಿಣ ಕನ್ನಡ” ಎಂಬ ಜಿಲ್ಲೆ ಹೆಸರನ್ನು “ಮಂಗಳೂರು ಜಿಲ್ಲೆ” ಅಥವಾ 'ಕುಡ್ಲ ಜಿಲ್ಲೆ' ಎಂದು ಬದಲಾಯಿಸುವ ಬಗ್ಗೆ ಜನಸಾಮಾನ್ಯರಲ್ಲಿ ಹಾಗೂ ರಾಜಕೀಯ ವಲಯದಲ್ಲಿ ಚರ್ಚೆ ಭರ್ಜರಿಯಾಗಿ ನಡೆಯುತ್ತಿದೆ.
ಈ ಚರ್ಚೆಗೆ ಕಾರಣವೆಂದರೆ, ಜಿಲ್ಲೆಯ ಪ್ರಮುಖ ಆಡಳಿತ ಕೇಂದ್ರ ಮಂಗಳೂರು ನಗರವಾಗಿದ್ದು, ಮಂಗಳೂರು ನಾಮವು ಸ್ಥಳೀಯ, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಹೊಂದಿದೆ. ಮಂಗಳೂರು ಬಂದರು, ವಿದ್ಯಾಸಂಸ್ಥೆಗಳು, ಪ್ರವಾಸೋದ್ಯಮ ಹಾಗೂ ಇತಿಹಾಸ ಎಲ್ಲವೂ ಸೇರಿ ದಕ್ಷಿಣ ಕನ್ನಡ ಹೆಸರಿನಿಂದ ಮಂಗಳೂರು ಜಿಲ್ಲೆ ಅಥವಾ ಕುಡ್ಲ ಜಿಲ್ಲೆ ಎಂಬ ಹೆಸರಿಗೆ ಮಾರ್ಪಡಿಸಲು ಭಾರಿ ಚರ್ಚೆ ನಡೆಸಲಾಗುತ್ತಿದೆ.
ಆದರೆ ಕೆಲವರ ಪ್ರಕಾರ, “ದಕ್ಷಿಣ ಕನ್ನಡ” ಎಂಬ ಹೆಸರು ಭಾಷಾ ಸಂಸ್ಕೃತಿ, ತುಳುನಾಡುತನ ಮತ್ತು ಭೌಗೋಳಿಕ ಅಧಿಷ್ಟಾನವನ್ನು ಪ್ರತಿಬಿಂಬಿಸುತ್ತದೆ. ಮಂಗಳೂರಿನಿಂದ ದೂರದ ಪ್ರದೇಶಗಳಾದ ಸುಳ್ಯ, ಪುತ್ತೂರು, ಬಂಟ್ವಾಳ, ಬೆಳ್ತಂಗಡಿ ಮುಂತಾದವುಗಳ ಜನರು ‘ಮಂಗಳೂರು’ ಎಂಬ ಹೆಸರನ್ನು ಹೊಂದಿರುವ ಜಿಲ್ಲೆಯಲ್ಲಿ ತಮ್ಮ ಅಭಿಮಾನವನ್ನು ಕಳೆದುಕೊಳ್ಳಬಹುದು ಎನ್ನುತ್ತಾರೆ.
ಮೂಲತಃ ಜಿಲ್ಲೆಯನ್ನು ಮಂಗಳೂರು ಜಿಲ್ಲೆಯೆಂದು 1956 ರ “ರಾಜ್ಯ ಪುನರ್ ರಚನೆ” ಸಂದರ್ಭದಲ್ಲಿ ಪರಿಗಣಿಸಲಾಗಿತ್ತು. ಆದರೆ ನಂತರದಲ್ಲಿ ಇದನ್ನು ದಕ್ಷಿಣ ಕನ್ನಡ ಎಂದು ಬದಲಾಯಿಸಲಾಯಿತು. ಕೆಲ ದಿನಗಳ ಹಿಂದೆ ಸುಮಾರು ನೂರಾರು ಗಣ್ಯ ವ್ಯಕ್ತಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚೆ ನಡೆಸಿದ್ದು, ಅದರಲ್ಲಿ ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಮತ್ತು ಇನ್ನಿತರ ಶಾಸಕರು ಪಾಲ್ಗೊಂಡು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.