ಬೆಂಗಳೂರು: ನಿಮ್ಮ ವಾರ್ಷಿಕ ವಹಿವಾಟು 40 ಲಕ್ಷ ರೂ. (ಸರಕುಗಳಿಗಾಗಿ) ಅಥವಾ 20 ಲಕ್ಷ ರೂ. (ಸೇವೆಗಳಿಗಾಗಿ) ಮೀರಿದರೆ, ಜಿಎಸ್‌ಟಿ ನೋಂದಣಿ ಮಾಡುವುದು ಈಗ ಕಡ್ಡಾಯವಾಗಿದೆ. ವಾಣಿಜ್ಯ ತೆರಿಗೆ ಇಲಾಖೆ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ನಗದು, ಯುಪಿಐ, ಪಿಒಎಸ್ ಅಥವಾ ಬೇರೆ ಯಾವುದೇ ಮಾಧ್ಯಮದ ಮೂಲಕ ಬಂದ ವಹಿವಾಟುಗಳು ಸೇರಿ ಈ ಲೆಕ್ಕಹಾಕಲಾಗುತ್ತದೆ.
ರಾಜಿ ತೆರಿಗೆ ಪದ್ಧತಿ ಸೌಲಭ್ಯ:
ಜಿಎಸ್‌ಟಿ ನೋಂದಣಿ ಮಾಡಿಕೊಂಡು, ವಾರ್ಷಿಕ 1.5 ಕೋಟಿ ರೂ.ಗೆ ಕಡಿಮೆ ವಹಿವಾಟು ಇರುವವರು, ‘ರಾಜಿ ತೆರಿಗೆ ಪದ್ಧತಿ’ (Composition Scheme) ಯನ್ನು ಆಯ್ಕೆ ಮಾಡಬಹುದು. ಇದರಲ್ಲಿ ಅವರು ಶೇ.0.5 ಸಿಜಿಎಸ್‌ಟಿ ಮತ್ತು ಶೇ.0.5 ಎಸ್‌ಜಿಎಸ್‌ಟಿ ಮಾತ್ರ ಪಾವತಿಸಬೇಕಾಗುತ್ತದೆ. ಆದರೆ, ಈ ಸೌಲಭ್ಯ ನೋಂದಣಿ ಮಾಡಿಲ್ಲದವರಿಗೆ ಅನ್ವಯವಾಗುವುದಿಲ್ಲ.
ನೋಟಿಸ್ ಬಂದರೆ ಏನು ಮಾಡಬೇಕು?
ವ್ಯಾಪಾರಿಗಳಿಗೆ ಗೊಂದಲಕ್ಕೊಳಗಾಗಬೇಕಿಲ್ಲ. ನೋಟಿಸ್ ಬಂದಲ್ಲಿ ಸಂಬಂಧಿತ ಕಚೇರಿಗೆ ಭೇಟಿ ನೀಡಿ, ಬೇಕಾದ ದಾಖಲೆಗಳನ್ನು ಕೊಡಬೇಕು. ಅಧಿಕಾರಿಗಳು ನಿಯಮಗಳನ್ನು ವಿವರಿಸಿ, ನಿಖರವಾಗಿ ತೆರಿಗೆ ವಿಧಿಸುತ್ತಾರೆ. ತೆರಿಗೆ ವಿನಾಯಿತಿ ಹೊಂದಿರುವ ಸರಕು ಅಥವಾ ಸೇವೆಗಳಿಗೆ ಜಿಎಸ್‌ಟಿ ಅನ್ವಯವಾಗುವುದಿಲ್ಲ.
ನಗದು ವಹಿವಾಟು ಕೂಡ ತೆರಿಗೆಯೊಳಗೆ:
ಕೆಲವರು ನೋಟಿಸ್ ತಪ್ಪಿಸಲು ನಗದು ವಹಿವಾಟಿಗೆ ಮಾರುಹೋಗುತ್ತಿದ್ದಾರೆ. ಆದರೆ ಇಲಾಖೆ ಎಚ್ಚರಿಸಿದ್ದು, ಯುಪಿಐವೋ ನಗದೋ – ಯಾವುದೇ ಮಾಧ್ಯಮದ ವಹಿವಾಟಿಗೂ ಜಿಎಸ್‌ಟಿ ಅನ್ವಯವಾಗುತ್ತದೆ. ಇಂತಹ ತಪ್ಪು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎನ್ನಲಾಗಿದೆ.
90% ವ್ಯಾಪಾರಿಗಳು ತೆರಿಗೆ ಪಾವತಿಸುತ್ತಿದ್ದಾರೆ:
ರಾಜ್ಯದಲ್ಲಿ 98,915 ವ್ಯಾಪಾರಿಗಳು ಈಗಾಗಲೇ ರಾಜಿ ತೆರಿಗೆ ಪದ್ಧತಿಯಡಿ ವ್ಯಾಪಾರ ಮಾಡುತ್ತಿದ್ದಾರೆ. ಇವರಲ್ಲಿ 90% ವ್ಯಾಪಾರಿಗಳು ಸರಿಯಾಗಿ ಶೇ.1 ತೆರಿಗೆ ಪಾವತಿಸುತ್ತಿದ್ದಾರೆ. ಆದರೆ ಉಳಿದ 10% ಇನ್ನೂ ನೋಂದಣಿ ಮಾಡದೆ ತೆರಿಗೆ ತಪ್ಪಿಸುತ್ತಿರುವುದು ಸರಿಯಲ್ಲ ಎಂದು ಇಲಾಖೆ ತಿಳಿಸಿದೆ