CEIR ಪೋರ್ಟಲ್ ಬಳಸಿ ಕಳೆದು ಹೋದ ಮೊಬೈಲ್ ಪತ್ತೆ ಹಚ್ಚುವಲ್ಲಿ ಕರ್ನಾಟಕ ನಂಬರ್ ಒನ್ : ಬನ್ನಿ ತಿಳಿಯೋಣ CEIR ಪೋರ್ಟಲ್ ಬಗ್ಗೆ.

  • 14 Mar 2025 06:51:24 PM

ಮಾರ್ಚ್ 03ನೇ 2025 ರ ಇತ್ತೀಚಿನ ಮಾಹಿತಿಯ ಪ್ರಕಾರ, ಕರ್ನಾಟಕವು CEIR ಮೂಲಕ 3,46,673 ಮೊಬೈಲ್ ಫೋನ್ ಕಳೆದುಹೋದ ಪ್ರಕರಣಗಳನ್ನು ದಾಖಲಿಸಿದೆ. ಇವುಗಳಲ್ಲಿ, 1,83,680 ಫೋನ್‌ಗಳನ್ನು ಯಶಸ್ವಿಯಾಗಿ ಪತ್ತೆಹಚ್ಚಲಾಗಿದೆ ಮತ್ತು 69,487 ಫೋನ್‌ಗಳನ್ನು ಅವುಗಳ ಮಾಲೀಕರಿಗೆ ಹಿಂತಿರುಗಿಸಲಾಗಿದೆ. ಕಳೆದುಹೋದ ಮೊಬೈಲ್ ಫೋನ್‌ಗಳನ್ನು ಮರುಪಡೆಯುವಲ್ಲಿ ಕರ್ನಾಟಕ ಅಗ್ರ ರಾಜ್ಯವಾಗಿ ಹೊರಹೊಮ್ಮಿದೆ. ಎಲ್ಲಾ ಕ್ರೆಡಿಟ್ CEIR (ಕೇಂದ್ರ ಸಲಕರಣೆ ಗುರುತಿನ ನೋಂದಣಿ) ಪೋರ್ಟಲ್ ಗೆ ಸಲ್ಲುತ್ತದೆ. 

 

ಸರ್ಕಾರದ CEIR (Central Equipment Identity Register) ಪೋರ್ಟಲ್ ಅನ್ನು ಬಳಸಿ ಕಳೆದ ಹೋದ ಮೊಬೈಲ್ ಫೋನ್ ಗಳನ್ನೂ ಮರಳಿ ಪಡೆಯುವುದು ಹೇಗೆ ಎನ್ನುವುದನ್ನು ಇಲ್ಲಿ ತಿಳಿಸಿಕೊಡಲಾಗಿದೆ. CEIR ಪೋರ್ಟಲ್ ಬಳಸಿ ನಿಮ್ಮ ಕಳೆದು ಹೋದ ಅಥವಾ ಕಳ್ಳತನವಾದ ಫೋನ್ ಗಳನ್ನೂ ಟ್ರ್ಯಾಕ್ ಮಾಡಿ ಮರಳಿ ಪಡೆದ ಉದಾಹರಣೆಗಳು ಬಹಳಷ್ಟು ಇದೆ.

 

ಇತೀಚೆಗೆ ಮೊಬೈಲ್ ಕಳ್ಳತನದ ಪ್ರಕರಣ ದೇಶದಾದ್ಯಂತ ಹೆಚ್ಚುತ್ತಲೇ ಇದೆ. ಕೆಲವು ಸಲ ನಮ್ಮ ಬೇಜವಾಬ್ದಾರಿಯಿಂದ ಮೊಬೈಲ್ ಫೋನ್ ಗಳನ್ನೂ ಕಳೆದುಕೊಳ್ಳುವುದಿದೆ. ತುಂಬಾ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಬೇರೆಯವರ ಫೋನ್ ಅಥವಾ ಯಾವುದೇ ವಸ್ತು ಸಿಕ್ಕಿದಲ್ಲಿ ತಕ್ಷಣ ಅವರಿಗೆ ಮರಳಿ ಹಿಂತಿರುಗಿಸುತ್ತಾರೆ ಆದರೆ ಭಾರತದಲ್ಲಿ ಕಳೆದು ಹೋದ ವಸ್ತು ಮರಳಿ ಸಿಗುವುದು ಸ್ವಲ್ಪ ಕಡಿಮೆ. 

 

ಅದಕ್ಕಾಗಿ ಭಾರತ ಸರಕಾರ, CEIR ಎನ್ನುವ ವೆಬ್ ಸೈಟ್ ಪೋರ್ಟಲ್ ಒಂದನ್ನು ಪರಿಚಯಿಸಿದೆ. ಬಹಳಷ್ಟು ಕಳೆದು ಹೋದ ಮೊಬೈಲ್ ಫೋನ್ ಗಳು ಈ ಪೋರ್ಟಲ್ ಸಹಾಯದಿಂದ ಮರಳಿ ಪಡೆದವರಿದ್ದಾರೆ. ಹಾಗಾದರೆ, ಬನ್ನಿ ತಿಳಿಯೋಣ CEIR ಪೋರ್ಟಲ್ ಹೇಗೆ ಕೆಲಸ ಮಾಡುತ್ತದೆ ಮತ್ತು ಅದರ ಪ್ರಯೋಜನಗಳೇನು?

 

ಏನಿದು CEIR ಪೋರ್ಟಲ್ ?

ಕೇಂದ್ರ ಸಲಕರಣೆ ಗುರುತಿನ ನೋಂದಣಿ (CEIR) ಒಂದು ಕೇಂದ್ರೀಕೃತ ವ್ಯವಸ್ಥೆಯಾಗಿದ್ದು, ಅದು ಮೊಬೈಲ್ ಸಾಧನಗಳನ್ನು ಅವುಗಳ ಅಂತರರಾಷ್ಟ್ರೀಯ ಮೊಬೈಲ್ ಸಲಕರಣೆ ಗುರುತಿನ (IMEI) ಸಂಖ್ಯೆಗಳನ್ನು ಬಳಸಿಕೊಂಡು ನಿರ್ವಹಿಸುತ್ತದೆ ಮತ್ತು ಟ್ರ್ಯಾಕ್ ಮಾಡುತ್ತದೆ. ಭಾರತ ಸರ್ಕಾರದ ದೂರಸಂಪರ್ಕ ಇಲಾಖೆಯು ಕದ್ದ ಮೊಬೈಲ್ ಫೋನ್‌ಗಳ ಮರುಪಡೆಯುವಿಕೆಗೆ ಈ ಪೋರ್ಟಲ್ ಅನ್ನು ಬಳಸುತ್ತಾರೆ.

 

ಹೊಸ ಮೊಬೈಲ್ ಖರೀದಿಸಿದ ಕೂಡಲೇ ಮಾಡಬೇಕಾದ ಕೆಲಸ :

ನಿಮ್ಮ ಫೋನ್‌ನ IMEI (ಅಂತರರಾಷ್ಟ್ರೀಯ ಮೊಬೈಲ್ ಸಲಕರಣೆ ಗುರುತು) ಸಂಖ್ಯೆಯನ್ನು ಪತ್ತೆ ಮಾಡಿ. 
ನೀವು ಅದನ್ನು ಸಾಮಾನ್ಯವಾಗಿ ಬ್ಯಾಟರಿಯ ಹಿಂದಿನ ಸ್ಟಿಕ್ಕರ್‌ನಲ್ಲಿ ಅಥವಾ ಫೋನ್ ಬಾಕ್ಸ್ ನಲ್ಲಿ ಮುದ್ರಿಸಿರುವುದನ್ನು ಕಾಣಬಹುದು. ಒಂದು ವೇಳೆ ನೀವು ಅದನ್ನು ಕಂಡುಹಿಡಿಯಲಾಗದಿದ್ದರೆ, IMEI ಸಂಖ್ಯೆಯನ್ನು ಪಡೆಯಲು ನಿಮ್ಮ ಫೋನ್‌ನಲ್ಲಿ *#06# ಅನ್ನು ಡಯಲ್ ಮಾಡಬಹುದು.

 

ಮೊಬೈಲ್ ಕಳೆದು ಹೋದರೆ CEIR ಮೂಲಕ ಹೇಗೆ ಸಂಪರ್ಕಿಸಬಹುದು?

ಮೊದಲು ನಿಮ್ಮ ಕಳೆದುಹೋದ ಅಥವಾ ಕದ್ದ ಫೋನ್ ಬಗ್ಗೆ ಪೊಲೀಸ್ ಠಾಣೆಗೆ ದೂರು (FIR) ಸಲ್ಲಿಸಿ. CEIR ಫೈಲಿಂಗ್ ಪ್ರಕ್ರಿಯೆಗಾಗಿ ನಿಮಗೆ (ಡಿಜಿಟಲ್ ಅಥವಾ ಬೌತಿಕ) ಪ್ರತಿಯ ಅಗತ್ಯವಿದೆ.

CEIR ಪೋರ್ಟಲ್ ಬಳಸಿ:
ಮೊದಲಿಗೆ CEIR ಪೋರ್ಟಲ್‌ಗೆ ಭೇಟಿ ನೀಡಿ;
"ಕದ್ದ/ಕಳೆದುಹೋದ ಮೊಬೈಲ್ ಅನ್ನು ನಿರ್ಬಂಧಿಸಿ" ಎಂಬ ಕೆಂಪು ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
ಒಂದು ಫಾರ್ಮ್ ಕಾಣಿಸಿಕೊಳ್ಳುತ್ತದೆ. ವಿವರಗಳನ್ನು ಭರ್ತಿ ಮಾಡಿ,
ಕಳೆದುಹೋದ ಅಥವಾ ಕದ್ದ ಸಿಮ್ ಕಾರ್ಡ್‌ಗೆ ಸಂಬಂಧಿಸಿದ ಮೊಬೈಲ್ ಸಂಖ್ಯೆ, ಫೋನ್‌ನ IMEI ಸಂಖ್ಯೆ, ನಿಮ್ಮ ಪೊಲೀಸ್ ದೂರಿನ (FIR) ವಿವರಗಳು, ನಿಮ್ಮ ವಿವರಗಳು (ಹೆಸರು, ವಿಳಾಸ, ಇತ್ಯಾದಿ) CAPTCHA ಪರಿಶೀಲನೆಯನ್ನು ಪೂರ್ಣಗೊಳಿಸಿ ಮತ್ತು "OTP ಪಡೆಯಿರಿ" ಕ್ಲಿಕ್ ಮಾಡಿ.

ಈ ರೀತಿಯಾಗಿ ಮುಂದಿನ ಪ್ರಕ್ರಿಯೆಯನ್ನು ಬಳಸಿಕೊಂಡು ನಿಮ್ಮ ಸಿಮ್ ಕಾರ್ಡನ್ನು ನಿಷ್ಕ್ರಿಯಗೊಳಿಸಬಹುದು ಮತ್ತು ಒಮ್ಮೆ ನಿಷ್ಕ್ರಿಯ ಗೊಳಿಸಿದ ನಂತರ ಅದೇ ಫೋನಿಗೆ ಬೇರೆ ಸಿಮ್ ಹಾಕಿದರೆ ನೋಟಿಫಿಕೇಶನ್ ಬರುವುದರ ಮೂಲಕ ಪೊಲೀಸ್ ಇಲಾಖೆ ಪತ್ತೆಹಚ್ಚುತ್ತದೆ.