ನಿಧಿ ತಿವಾರಿ ಪ್ರಧಾನಿ ನರೇಂದ್ರ ಮೋದಿಯವರ ಖಾಸಗಿ ಕಾರ್ಯದರ್ಶಿಯಾಗಿ ನೇಮಕಗೊಂಡ ಮಹಿಳೆ. ಸರ್ಕಾರ ಹೊರಡಿಸಿದ ಅಧಿಕೃತ ಆದೇಶದ ಪ್ರಕಾರ, ಭಾರತೀಯ ವಿದೇಶಾಂಗ ಸೇವೆ (IFS) ಅಧಿಕಾರಿ ನಿಧಿ ತಿವಾರಿ ಅವರನ್ನು ಪ್ರಧಾನಿ ಮೋದಿಯವರ ಖಾಸಗಿ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.
ಪ್ರಧಾನ ಮಂತ್ರಿಯವರ ಖಾಸಗಿ ಕಾರ್ಯದರ್ಶಿ ಹುದ್ದೆಯನ್ನು ಅಲಂಕರಿಸುವಾಗ, ಅವರು ಪ್ರಧಾನ ಮಂತ್ರಿಯವರ ದೈನಂದಿನ ಕೆಲಸವನ್ನು ಸಂಘಟಿಸುವುದು, ಪ್ರಮುಖ ಸಭೆಗಳನ್ನು ಆಯೋಜಿಸುವುದು ಮತ್ತು ವಿವಿಧ ಸರ್ಕಾರಿ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಬೇಕಾಗುತ್ತದೆ.
ನಿಧಿ ತಿವಾರಿ ಈಗಾಗಲೇ ಪ್ರಧಾನ ಮಂತ್ರಿ ಕಚೇರಿಯಲ್ಲಿ ಕೆಲಸ ಮಾಡಿದ್ದಾರೆ. ಈ ಹಿಂದೆ ನವೆಂಬರ್ 2022 ರಿಂದ ಪ್ರಧಾನ ಮಂತ್ರಿಗಳ ಕಚೇರಿಯಲ್ಲಿ (PMO) ಉಪ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ. ಇದಕ್ಕೂ ಮೊದಲು ಅವರು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ನಿಶ್ಯಸ್ತ್ರೀಕರಣ ಮತ್ತು ಅಂತರರಾಷ್ಟ್ರೀಯ ಭದ್ರತಾ ವ್ಯವಹಾರಗಳ ವಿಭಾಗದಲ್ಲಿ ಅಧೀನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.
ನಿಧಿ ತಿವಾರಿಯವರು 2014 ರ ಬ್ಯಾಚ್‌ನ ಭಾರತೀಯ ವಿದೇಶಾಂಗ ಸೇವೆ (IFS) ಅಧಿಕಾರಿಯಾಗಿದ್ದರು. ಮಾರ್ಚ್ 29 ರಂದು ಹೊರಡಿಸಿದ ಜ್ಞಾಪಕ ಪತ್ರದ ಪ್ರಕಾರ, ಸಂಪುಟದ ನೇಮಕಾತಿ ಸಮಿತಿಯು ತಿವಾರಿ ಅವರ ನೇಮಕಾತಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅನುಮೋದಿಸಿದೆ.
ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ 96ನೇ ಶ್ರೇಣಿಯಲ್ಲಿ ರ‍್ಯಾಂಕ್. ನಿಧಿ ತಿವಾರಿ ನಾಗರೀಕ ಸೇವಾ ಪರೀಕ್ಷೆಯಲ್ಲಿ (Civil Service Examination) 96ನೇ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಅವರು ವಾರಣಾಸಿಯ ಮೆಹಮುರ್ಗಂಜ್ ಮೂಲದವರು.
ಪ್ರಧಾನ ಮಂತ್ರಿ ಕಚೇರಿಯಲ್ಲಿ ಖಾಸಗಿ ಕಾರ್ಯದರ್ಶಿ ಹುದ್ದೆಗೆ ನೇಮಕಗೊಂಡ ಅಧಿಕಾರಿಗಳ ವೇತನ ಶ್ರೇಣಿಯನ್ನು ಪೇ ಮ್ಯಾಟ್ರಿಕ್ಸ್ ಮಟ್ಟ 14 ರ ಪ್ರಕಾರ ನಿರ್ಧರಿಸಲಾಗುತ್ತದೆ. ಈ ಹಂತದಲ್ಲಿ, ತಿಂಗಳಿಗೆ ಒಂದು ಲಕ್ಷಕ್ಕಿಂತ ಹೆಚ್ಚು ಸಂಬಳ, ತುಟ್ಟಿ ಭತ್ಯೆ (ಡಿಎ), ಮನೆ ಭತ್ಯೆ (ಎಚ್‌ಆರ್‌ಎ), ಪ್ರಯಾಣ ಭತ್ಯೆ (ಟಿಎ) ಮತ್ತು ಇತರ ಭತ್ಯೆಗಳನ್ನು ಸಹ ನೀಡಲಾಗುತ್ತದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.